ನಶಾಮುಕ್ತ ಭಾರತ ಅಭಿಯಾನ ಕುರಿತು ಶಿರ್ವ ಪೊಲೀಸರಿಂದ ಉಪನ್ಯಾಸ
ಶಿರ್ವ ಸಂತ ಮೇರಿ ಪಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ
(Shirva) ಶಿರ್ವ ; ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ವಾರ್ಷಿಕ ವಿಶೇಷ ಶಿಬಿರದಲ್ಲಿ ಶಿರ್ವ ಠಾಣೆಯ ಪಿಎಸ್‌ಐ (ಅಪರಾಧ) ಲೋಹಿತ್ ಕುಮಾರ್, ಹೆಡ್ ಕಾನ್ಸ್ಟೇಬಲ್ ಮಂಜುನಾಥ ಅಡಿಗರವರು ಭಾಗವಹಿಸಿ ನಶಾಮುಕ್ತ ಭಾರತ ಇದರ ಕುರಿತು ಉಪನ್ಯಾಸ ನೀಡಿದರು.
ಮೂಡುಬೆಳ್ಳೆಯ ಸಂತ ಲಾರೆನ್ಸ್ ಪ್ರೌಢಶಾಲಾ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇಂದಿನ ಪರಿಸ್ಥಿತಿಯಲ್ಲಿ ನಶಾ ಪದಾರ್ಥಗಳು ಹಾಗೂ ವ್ಯಸನವು ಸಮಾಜಕ್ಕೆ ದೊಡ್ಡ ಶತ್ರುವಾಗಿದೆ. ಮದ್ಯಪಾನ, ಗಾಂಜಾ, ತಂಬಾಕು, ಡ್ರಗ್ಸ್ ಮುಂತಾದವು ಯುವಜನತೆಯನ್ನು ತಪ್ಪು ದಾರಿಯಲ್ಲಿ ಕೊಂಡೊಯ್ಯುತ್ತದೆ.
ನಶಾ ಸೇವನೆಯಿಂದ ನಮ್ಮ ದೇಹವು ಹಾಳಾಗುತ್ತದೆ. ಹಣ ವ್ಯರ್ಥವಾಗುತ್ತದೆ. ಕುಟುಂಬದ ಶಾಂತಿ ಕಳೆದು ಹೋಗುತ್ತದೆ. ಯುವಕರು ದೇಶದ ಶಕ್ತಿ, ಆದರೆ ಅವರೇ ನಶೆಗೆ ಬಲಿಯಾದರೆ ದೇಶ ದುರ್ಬಲವಾಗುತ್ತದೆ.
ನಶಾಮುಕ್ತ ಭಾರತಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕ. ಶಾಲೆಗಳಲ್ಲಿಯೇ ವಿದ್ಯಾರ್ಥಿಗಳಿಗೆ ನಶಾದ ದುಷ್ಪರಿಣಾಮಗಳನ್ನು ತಿಳಿಸಬೇಕು. ಸಮಾಜ ಸೇವಾ ಸಂಘಗಳು, ಯುವಕ ಸಂಘಗಳು ಹಾಗೂ ಮಾಧ್ಯಮಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದರು.
ಶಿಬಿರದಲ್ಲಿ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಸುಮಾರು 40 ವಿದ್ಯಾರ್ಥಿಗಳು ಪಾಲ್ಗೊಂಡರು.
ವೇದಿಕೆಯಲ್ಲಿ ಶಿರ್ವ ಸಂತ ಮೇರಿ ಕಾಲೇಜಿನ NSS ಅಧಿಕಾರಿ ಶ್ರೀಮತಿ ಜೆಸಿಂತ ಮರಿಯ ಫುರ್ಟಾಡೊ, ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಪ್ರಭಾ ಶೆಣೈ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಸುಜಾತ ಅಮೀನ್ ರವರು ಉಪಸ್ಥಿತರಿದ್ದರು.

