ಬೆಳಪು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
ಶೇ. 25 ಡಿವಿಡೆಂಡ್ ಘೋಷಿಸಿದ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ
(Belapu) ಬೆಳಪು, ಜು. 21 : ಬೆಳಪು ಹಾಲು ಉತ್ಪಾದಕರ ಸಹಕಾರಿ ಸಂಘದ 2025–26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಈ ಸಂದರ್ಭ ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ 5 ಲಕ್ಷ 12 ಸಾವಿರ ರೂಪಾಯಿ ಲಾಭ ಗಳಿಸಿದ್ದು ಶೇ. 25 ಡಿವಿಡೆಂಡ್ ನೀಡಲಾಗುವುದು ಎಂದರು.
ದ. ಕ. ಹಾಲು ಒಕ್ಕೂಟಕದ ಉಪವ್ಯವಸ್ಥಾಪಕ ಮಾಧವ ಐತಾಳ್ ಮಾತನಾಡಿ, ಪ್ರತಿಯೊಬ್ಬ ಹೈನುಗಾರರೂ ಸಂಘ, ಒಕ್ಕೂಟ ಮತ್ತು ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಅರಿತುಕೊಳ್ಳಬೇಕಿದೆ. ಪ್ರಸ್ತುತ 900 ಲೀಟರ್ ಹಾಲು ಪೂರೈಕೆಯಾಗುತ್ತಿದ್ದು ಮುಂದೆ 1000 ಲೀಟರ್ ಹಾಲು ಸಂಗ್ರಹಿಸುವ ಗುರಿಯೊಂದಿಗೆ ಮುನ್ನಡೆದಲ್ಲಿ ಸಂಘವೂ ಲಾಭ ಗಳಿಸುತ್ತದೆ, ಹೈನುಗಾರರಿಗೂ ಲಾಭಾಂಶ ದೊರಕಲಿದೆ ಎಂದರು.
ಸಂಘದ ಸದಸ್ಯರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ, ಪ್ರೋತ್ಸಾಹಕ ಬಹುಮಾನ ಹಾಗೂ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಬೆಳಪು ಸಹಕಾರಿ ವ್ಯವಸಾಯಿಕ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಸುಲೋಚನಾ ದೇವಾಡಿಗ, ಬೆಳಪು ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಶೋಭಾ ಭಟ್, ದ. ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಮಾಧವ ಐತಾಳ್, ವಿಸ್ತರಣಾಧಿಕಾರಿ ಶಮೀರ್ ಅತಿಥಿಗಳಾಗಿ ಭಾಗವಹಿಸಿದ್ದರು.
ಬೆಳಪು ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಕುಂಜೂರು, ನಿರ್ದೇಶಕರಾದ ರಮಾನಂದ ಮೂಲ್ಯ, ಚಂದ್ರಕಾಂತ ಶೆಟ್ಟಿ, ಗಣೇಶ್ ದೇವಾಡಿಗ, ದಿನೇಶ್ ಪೂಜಾರಿ, ಜೆನ್ನಿ ನರಸಿಂಹ ಭಟ್, ಗುರುರಾಜ್ ಆಚಾರ್, ಅಣ್ಣು ಮುಖಾರಿ, ದಿವಾಕರ ಶೆಟ್ಟಿ, ಗೌರಿ ಶೆಟ್ಟಿ, ಶ್ರೀದೇವಿ ಎಸ್. ಪೂಜಾರಿ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾದವ್ ರಾವ್ ಸ್ವಾಗತಿಸಿ, ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ಸಿಬ್ಬಂದಿ ಪ್ರಸಾದ್ ಆಚಾರ್ಯ ಪ್ರಾರ್ಥಿಸಿದರು.
ಸಭೆಯಲ್ಲಿ ಸಂಘದ ಅಭಿವೃದ್ಧಿ, ಹಾಲು ಉತ್ಪಾದನೆ ಹೆಚ್ಚಳ, ಸದಸ್ಯರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳು ಹಾಗೂ ಮುಂದಿನ ಸಾಲಿನ ಯೋಜನೆಗಳ ಕುರಿತು ಚರ್ಚೆ ನಡೆಯಿತು.
ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಿದರು.

