ಕನ್ನಡ ಮಾಧ್ಯಮ ಶಾಲೆಗಳಿಂದಲೇ ಕನ್ನಡ ಭಾಷೆಯ ಉಳಿವು, ಬೆಳವಣಿಗೆ : ರಾಜ್ಯ ಪ್ರಶಸ್ತಿ ವಿಜೇತ ಆನಂದ್ ಸಿ. ತಿರುಮಲ
ಗಾಂಧಿ ಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ 71ನೇ ಕನ್ನಡ ರಾಜ್ಯೋತ್ಸವ ಪುರಸ್ಕಾರ ಸಮಾರಂಭ
(Mandya) ಮಂಡ್ಯ: ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ಭವಿಷ್ಯದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಕವಿ, ಲೇಖಕ ಆನಂದ್ ಸಿ. ತಿರುಮಲ ಅಭಿಪ್ರಾಯಪಟ್ಟರು.
ನಗರದ ಗಾಂಧಿ ಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ಆಯೋಜಿಸಿದ್ದ ರಾಜ್ಯಮಟ್ಟದ ಕವಿ-ಕಾವ್ಯ ಮೇಳ ಹಾಗೂ 71ನೇ ಕನ್ನಡ ರಾಜ್ಯೋತ್ಸವ ಪುರಸ್ಕಾರ ಸಮಾರಂಭದಲ್ಲಿ ಕನ್ನಡ ಭಾಷೆಯ ಮಹತ್ವ ಕುರಿತು ಮಾತನಾಡಿದ ಅವರು, ಕನ್ನಡ ಭಾಷೆಗೆ ತನ್ನದೇ ಆದ ವಿಶಿಷ್ಟ ಇತಿಹಾಸ, ಸಾಹಿತ್ಯ ಪರಂಪರೆ ಮತ್ತು ಸಾಂಸ್ಕೃತಿಕ ವೈಭವವಿದೆ. ಪಂಪ, ರನ್ನ, ಜನ್ನ ಸೇರಿದಂತೆ ಆದಿಕವಿಗಳು ಕನ್ನಡ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಇದರ ಫಲವಾಗಿ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ಮಾತನಾಡಿ, ಸಾಹಿತಿಗಳು ಸಮಾಜದ ಸತ್ಯಗಳನ್ನು ಪ್ರತಿಬಿಂಬಿಸುವ ಸಾಹಿತ್ಯ ರಚಿಸುವ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ರಘುಪತಿ ತಾಮ್ಹನ್‌ಕರ ಮಾತನಾಡಿ, ಮಾನವೀಯತೆಗೆ ಯಾವುದೇ ಭಾಷೆಯ ಗಡಿಯಿಲ್ಲ. ಕನ್ನಡ ಮತ್ತು ಮರಾಠಿ ಸೇರಿದಂತೆ ಎಲ್ಲ ಭಾಷೆಗಳ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಸ್ಮಿ ಕಲಾಕುಟೀರದ ಭರತನಾಟ್ಯ ವಿದ್ಯಾರ್ಥಿನಿಯರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ 71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಕವಿಗೋಷ್ಠಿ ಜರುಗಿತು.
ವೇದಿಕೆಯಲ್ಲಿ ಡಾ. ಎಚ್.ಸಿ. ಆನಂದ್, ವಕೀಲ ಎಂ. ಗುರುಪ್ರಸಾದ್, ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಪೊತೇರ ಮಹದೇವು, ರೈತಸಂಘದ ರೂಪನಿತಿನ್ ಹರಳಕುಪ್ಪೆ, ಎಚ್.ಎಂ. ಬಸವರಾಜು, ಎಚ್.ಜಿ. ಲೀಲಾವತಿ, ಮಂಜುಳಾ ರಮೇಶ್, ಬಸವರಾಜು ತಿಬ್ಬನಹಳ್ಳಿ, ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

