ಅ.27 : ಸಮಸ್ತದ ಶತಮಾನೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಸಮಸ್ತ ತಾತ್ವಿಕ ಸಮಾವೇಶ
ಕಾಪು ಕೊಪ್ಪಲಂಗಡಿಯ ಇನಾಸನ್ ಆಡಿಟೋರಿಯಂನಲ್ಲಿ ನಡೆಯಲಿರುವ ಸಮಾವೇಶ
(Kaup) ಕಾಪು : ಪ್ರಮುಖ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸರ ಸಂಘಟನೆಯಾದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಶತಮಾನೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಮತ್ತು ಸುನ್ನೀ ಜಂಇಯ್ಯತುಲ್ ಉಲಮಾ, ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಉಡುಪಿ ಜಿಲ್ಲಾ ಸಮಸ್ತ ತಾತ್ವಿಕ ಸಮಾವೇಶವನ್ನು ಅ. 27, ಮಂಗಳವಾರ ಸಂಜೆ 4:30ಕ್ಕೆ ಕಾಪು ಕೊಪ್ಪಲಂಗಡಿಯ ಇನಾಸನ್ ಆಡಿಟೋರಿಯಂನಲ್ಲಿ, ತಾಜುಲ್ ಫುಖಹಾ ಖಾಝಿ ಬೇಕಲ್ ಉಸ್ತಾದ್ ವೇದಿಕೆಯಲ್ಲಿ ಆಯೋಜಿಸಲಾಗಿದೆ ಎಂದು ಸುನ್ನೀ ಉಲಮಾ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಬಹುಮಾನ್ಯ ಬಿ.ಎ. ಇಸ್ಮಾಯಿಲ್ ಮದನಿ ಮಾವಿನಕಟ್ಟೆ ಹೇಳಿದರು.
ಅವರು ಸೋಮವಾರ ಕಾಪು ಪತ್ರಿಕಾಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ 1926 ರಲ್ಲಿ ಸ್ಥಾಪನೆಯಾಗಿ ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದೆ. ಧಾರ್ಮಿಕ ಶಿಕ್ಷಣದ ಪ್ರಸಾರ, ಸುನ್ನೀ ಆದರ್ಶಗಳ ಸಂರಕ್ಷಣೆ, ನೈತಿಕ ಮೌಲ್ಯಗಳ ಪ್ರಚಾರ ಹಾಗೂ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಸಮಸ್ತವು ಶತಮಾನಕಾಲದಿಂದ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ.
ಸಮಸ್ತದ ಶತಮಾನ ಕಾಲದ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗಳನ್ನು ಸ್ಮರಿಸುವುದು, ಸಮಸ್ತದ ಆದರ್ಶಗಳು ಹಾಗೂ ತಾತ್ವಿಕ ನಿಲುವುಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವುದು, ಧಾರ್ಮಿಕ ಸಾಮರಸ್ಯ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ಸಾರುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ.
ಸಮಾವೇಶದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಾಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಖುದುವತುಸ್ಸಾದಾತ್ ಅಸ್ಸಯ್ಯಿದ್ ಕೆ.ಎಸ್. ಆಟ್ಟಕ್ಕೋಯ ತಂಙಳ್ ಕುಂಬೋಳ್, ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ, ಸಮಸ್ತ ಸೆಂಟಿನರಿ ಅಧ್ಯಕ್ಷ ಮೌಲಾನ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಮೌಲಾನ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಹಾಗೂ ಮೌಲಾನ ಅಬೂಸುಫ್ಯಾನ್ ಇಬ್ರಾಹಿಂ ಮದನಿ ಸೇರಿದಂತೆ ಪ್ರಮುಖ ಧಾರ್ಮಿಕ ನಾಯಕರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಸಮಾಜಸೇವಕ ಇನಾಯತ್ ಅಲಿ ಮುಲ್ಕಿ ಸೇರಿದಂತೆ ಸಾಮಾಜಿಕ ಹಾಗೂ ಸಾರ್ವಜನಿಕ ಕ್ಷೇತ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಸುನ್ನೀ ಕೋ-ಆರ್ಡಿನೇಷನ್ ಅಧ್ಯಕ್ಷ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ, ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ. ಅಬೂಬಕ್ಕರ್ ನೇಜಾರು, ಉಡುಪಿ ಜಿಲ್ಲಾ ಸುನ್ನೀ ಉಲಮಾ ಒಕ್ಕೂಟದ ಕಾರ್ಯದರ್ಶಿ ಎಂ.ಎಚ್. ಸುಲೈಮಾನ್ ಸಅದಿ ಅಲ್ ಅಫ್ಳಲಿ ಕಾರ್ಕಳ, ಉಡುಪಿ ಜಿಲ್ಲಾ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಪ್ರ.ಕಾರ್ಯದರ್ಶಿ ಹಾಜಿ ಎಮ್ ಎ ಬಾವು ಮೂಳೂರು, ತಾತ್ವಿಕ ಸಮಾವೇಶದ ಸ್ವಾಗತ ಸಮಿತಿಯ ಚೇರ್ಮನ್ ಜಿ. ಅಶ್ರಫ್ ತೋನ್ಸೆ, ಜನರಲ್ ಕನ್ವೀನರ್ ಎಂ.ಕೆ. ಅಬ್ದುರ್ರಶೀದ್ ಸಖಾಫಿ ಮಜೂರು ಉಪಸ್ಥಿತರಿದ್ದರು.

