ಆಳ್ವಾಸ್ ಕೇರಳೀಯಂ: ಕೇರಳದ ಸಾಂಸ್ಕೃತಿಕ ವೈವಿಧ್ಯ ಅನಾವರಣ
ಮುಂಡ್ರುದೆಗುತ್ತು ಕೆ ಅಮರನಾಥ್ ಶೆಟ್ಟಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮ
(Moodabidri) ಮೂಡುಬಿದಿರೆ: ಕೇರಳದ ಶ್ರೀಮಂತ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ವೈವಿಧ್ಯಮಯ ಜೀವನ ಶೈಲಿಯನ್ನು ಕರ್ನಾಟಕದ ನೆಲದಲ್ಲಿ ಅನಾವರಣಗೊಳಿಸುವ ‘ಆಳ್ವಾಸ್ ಕೇರಳೀಯಂ –2026’ ಕಾರ್ಯಕ್ರಮ ಆಳ್ವಾಸ್ ವಿದ್ಯಾಸಂಸ್ಥೆಯ ಮುಂಡ್ರುದೆಗುತ್ತು ಕೆ ಅಮರನಾಥ್ ಶೆಟ್ಟಿ ವೇದಿಕೆಯಲ್ಲಿ ಗುರುವಾರ ನಡೆಯಿತು.
ಕೇರಳದ ಸಾಂಸ್ಕೃತಿಕ ಪರಂಪರೆಯ ವೈವಿಧ್ಯವನ್ನು ಒಂದೇ ವೇದಿಕೆಯಲ್ಲಿ ಕಟ್ಟಿಕೊಟ್ಟ ಭವ್ಯ ಮೆರವಣಿಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.
ಕೇರಳದ ಸಾಂಪ್ರದಾಯಿಕ ವೇಷಭೂಷಣ, ಜನಪದ ಕಲೆ, ಶಾಸ್ತ್ರೀಯ ನೃತ್ಯ, ವಾದ್ಯ ಸಂಗೀತ ಹಾಗೂ ಆಚರಣೆಗಳ ಸೊಬಗನ್ನು ಮೆರವಣಿಗೆಯಲ್ಲಿ ಪ್ರಸ್ತುತಪಡಿಸಲಾಯಿತು.
ಮೆರವಣಿಗೆಯಲ್ಲಿ ಕಥಕಳಿ, ಮೋಹಿನಿಯಾಟ್ಟಂ ಮತ್ತು ಮಾವೇಲಿ ಪಾತ್ರಗಳ ಸಂಯೋಜಿತ ಪ್ರದರ್ಶನ ಗಮನ ಸೆಳೆಯಿತು.
ಕೇರಳದ ಸಾಂಪ್ರದಾಯಿಕ ವಾದ್ಯ ಪರಂಪರೆಯನ್ನು ಪ್ರತಿಬಿಂಬಿಸುವ ಪಂಚವಾದ್ಯಂ ಮೆರವಣಿಗೆಗೆ ವಿಶಿಷ್ಟ ಮೆರುಗು ನೀಡಿತು. ಅದರೊಂದಿಗೆ ತಾಲಪೊಲಿ, ಪುಲಿಕಳಿ, ಚೆಂಡೆ, ಬಾಲಕ–ಬಾಲಕಿಯರ ಸಾಂಸ್ಕೃತಿಕ ಸಂಯೋಜಿತ ಪ್ರದರ್ಶನ, ಕಾವಡಿ, ಒಪ್ಪನ, ಕೋಲ್ಕಳಿ, ಕಲರಿ ಮೊದಲಾದ ಕಲಾ ಪ್ರಕಾರಗಳು ಮೆರವಣಿಗೆಯಲ್ಲಿ ಮೂಡಿಬಂದವು.
ಕೇರಳದ ಉತ್ತರ ಭಾಗದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ತೆಯ್ಯಂ ವಿವಿಧ ರೂಪಗಳಲ್ಲಿ ಪ್ರಸ್ತುತವಾಯಿತು. ಥಾಬೋಲಂ, ಗರುಡನ್ ಹಾಗೂ ಪೂರ್ಣ ತಿರುವಾತಿರ ಪ್ರದರ್ಶನಗಳು ಮೆರವಣಿಗೆಯ ಮತ್ತಷ್ಟು ಪ್ರಮುಖ ಆಕರ್ಷಣೆಗಳಾಗಿದ್ದವು. ಹೀಗೆ ಕೇರಳದ ಶಾಸ್ತ್ರೀಯ, ಜನಪದ ಹಾಗೂ ಆಚರಣಾಧಾರಿತ ಕಲೆಗಳ ವೈವಿಧ್ಯವನ್ನು ವಿದ್ಯಾರ್ಥಿಗಳು ಕಲಾತ್ಮಕವಾಗಿ ಕಟ್ಟಿಕೊಟ್ಟರು.
ಕೇರಳದ ಸಾಂಪ್ರದಾಯಿಕ ಜನಪದ ನೃತ್ಯವಾದ ಮೆಗಾ ತಿರುವಾತ್ತಿರ ಕಾರ್ಯಕ್ರಮದ ಆರಂಭದಲ್ಲೇ ವಿಶೇಷ ಮೆರುಗು ನೀಡಿತು. ಇದಾದ ಬಳಿಕ ಕೇರಳದ ವಿವಿಧ ಪ್ರದೇಶಗಳ ವಿಶಿಷ್ಟ ಕಲಾ ಪರಂಪರೆಗಳನ್ನು ಪ್ರತಿನಿಧಿಸುವ ಕಾಯ್ಕೊಟ್ಟಿಕಲಿ, ಒಪ್ಪಣ, ಕೊಲ್ಕಳಿ, ಕಲರಿ ಮತ್ತು ತೆಯ್ಯಂ ಸೇರಿದಂತೆ ಹಲವು ಕಲಾ ಪ್ರಕಾರಗಳು ವೇದಿಕೆಯಲ್ಲಿ ಮೂಡಿಬಂದವು.
ಕಾರ್ಯಕ್ರಮ ಮಲಯಾಳಂ ಚಿತ್ರರಂಗದ ನಟ ಹಾಗೂ ನಿರ್ದೇಶಕ ಬಿನು ಪಪ್ಪು ಉದ್ಘಾಟಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಹಾಗೂ ಆಟೋಮೋಟಿವ್ ಕಂಟೆಂಟ್ ಕ್ರಿಯೇಟರ್, ಆಳ್ವಾಸ್ನ ಹಳೆ ವಿದ್ಯಾರ್ಥಿ ಮೊಹಮ್ಮದ್ ಫಹಾದ್, ಉದ್ಯಮಿ ಮುಸ್ತಾಫ, ಪ್ರಮುಖರಾದ ಅಕ್ಷಯ ಜೈನ್, ನೌಷಧ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಫಾವಜ್ , ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಇದ್ದರು.
ಫೆನಿಲ್ಡಾ ನಿರೂಪಿಸಿದರು. ಕೆಝಿಯಾ ಮೇರಿ ಜಾರ್ಜ ಸ್ವಾಗತಿಸಿದರು. ಆರಂಟಾ ವಂದಿಸಿದರು.

