ಸ್ವಿಟ್ಸರ್ಲೆಂಡ್ ನ ಪ್ರತಿಷ್ಠಿತ ಡನ್ಸ್ಟರ್ ಬಿಸಿನೆಸ್ ಸ್ಕೂಲ್ ನಿಂದ ಹೇಮಾವತಿ ವೀ.ಹೆಗ್ಗಡೆಗೆ ಗೌರವ ಡಾಕ್ಟರೇಟ್ ಪ್ರದಾನ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಜ್ಯಮಟ್ಟದ ಪುನಶ್ವೇತನಾ ಕಾರ್ಯಾಗಾರದಲ್ಲಿ ಪದವಿ ಪ್ರದಾನ
(Dharmastala) ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆ ಅವರು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾಗಿ ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಸೇವಾ ಚಟುವಟಿಕೆಗಳಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಜಾಗತಿಕ ಮನ್ನಣೆ ಪಡೆದ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಯಾದ ಸ್ವಿಟ್ಟರ್ಲೆಂಡ್ನ ಪ್ರತಿಷ್ಠಿತ ಡನ್ಸ್ಟರ್ ಬಿಸಿನೆಸ್ ಸ್ಕೂಲ್ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಡನ್ಸ್ಟರ್ ಬಿಸಿನೆಸ್ ಸ್ಕೂಲ್ ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಜ್ಯಮಟ್ಟದ ಕಾರ್ಯಕರ್ತರ ಪುನಶ್ವೇತನಾ ಕಾರ್ಯಾಗಾರದಲ್ಲಿ ಡನ್ಸ್ಟರ್ ಬಿಸಿನೆಸ್ ಸ್ಕೂಲ್ ಅಧ್ಯಕ್ಷ ಫಿಲಿಪ್ ಥೆವೆನೋಟ್ ಆನ್ ಲೈನ್ ಮೂಲಕ ಪದವಿ ಪ್ರಕಟಿಸಿದರು.
ಡನ್ಸ್ಟರ್ ಬಿಸಿನೆಸ್ ಸ್ಕೂಲ್ನ ಪರವಾಗಿ ಅವಿನಾಶ್ ಗುಪ್ತಾ ಅವರು ಗೌರವ ಡಾಕ್ಟರೇಟ್ ಪದವಿಯನ್ನು ಧರ್ಮಸ್ಥಳದಲ್ಲಿ ಪ್ರದಾನ ಮಾಡಿದರು.
ಅ ವಾರು ಮಾತನಾಡಿ, ಜಗತ್ತು ಮಹಿಳಾ ಸಬಲೀಕರಣ, ಆರ್ಥಿಕತೆ, ಸಾಮಾಜಿಕ ಉದ್ಯಮಶೀಲತೆ ಮತ್ತು ಸಮಗ್ರ ಅಭಿವೃದ್ಧಿಯಂತಹ ಪರಿಕಲ್ಪನೆಗಳನ್ನು ಒಪ್ಪಿಕೊಳ್ಳುವುದಕ್ಕಿಂತ ದಶಕಗಳ ಹಿಂದೆಯೇ ರಾಜ್ಯಾದ್ಯಂತ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಹೇಮಾವತಿ ವೀ. ಹೆಗ್ಗಡೆ ಕೆಲಸ ಮಾಡಿದ್ದಾರೆ. ಇವರ ಉದಾತ್ತ ಆದರ್ಶಗಳಿಗೆ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಸಾಕ್ಷಿಯಾಗಿದೆ.
ಸಿರಿ ಗ್ರಾಮೋದ್ಯೋಗ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿದೆ. ಪರಿಸರ, ಜಲ ಸಂರಕ್ಷಣೆಯ ನಿಟ್ಟಿನಲ್ಲೂ ಕೆಲಸ ಮಾಡಿದ್ದಾರೆ. ಮಹಿಳಾ ಸಬಲೀಕರಣ, ಗ್ರಾಮಾಭಿವೃದ್ಧಿ ಸಮುದಾಯದ ನಾಯಕತ್ವ ಮತ್ತು ಮಾನವೀಯ ಸೇವೆಗೆ ಅವರು ನೀಡಿರುವ ಅಸಾಧಾರಣ ಕೊಡುಗೆಗಳನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳಾದ ಡಾ. ಹರೀಶ್ ಕೃಷ್ಣ ಸ್ವಾಮಿ, ಉದಯ ಕುಮಾರ್ ಶೆಟ್ಟಿ, ಸಂಪತ್ ಸಾಮ್ರಾಜ್ಯ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್., ಯೋಜನೆಯ ಹಣಕಾಸು ಅಧಿಕಾರಿಗಳಾದ ಶಾಂತಾರಾಮ್ ಆರ್. ಪೈ, ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಪ್ರಾದೇಶಿಕ ನಿರ್ದೇಶಕರು, ನಿರ್ದೇಶಕರು, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.

