ಉಡುಪಿ–ಚಿಕ್ಕಮಗಳೂರು, ದ.ಕ ಲೋಕಸಭಾ ಸದಸ್ಯತ್ವ ಯಾರ ಮಡಿಲಿಗೆ? ಕುತೂಹಲಕ್ಕೆ ನಾಳೆ ತೆರೆ
(Udupi – Mangaluru) ಉಡುಪಿ- ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್ ನಿಂದ ಪದ್ಮರಾಜ್ ಆರ್. ಸ್ಪರ್ಧಿಸಿದ್ದು, ಇವರಿಬ್ಬರ ಮಧ್ಯೆ ಗೆಲುವಿಗಾಗಿ ನೇರ ಪೈಪೋಟಿ ನಡೆಯಲಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಕೆ.ಜಯಪ್ರಕಾಶ್ ಸ್ಪರ್ಧಿಸಿದ್ದು, ಇವರಿಬ್ಬರ ಮಧ್ಯೆಯೂ ಗೆಲುವಿಗಾಗಿ ನೇರ ಪೈಪೋಟಿ ನಡೆಯಲಿದೆ.
ಮಂಗಳವಾರ ಬೆಳಿಗ್ಗೆ ಯಾರ ಕೊರಳಿಗೆ ವಿಜಯಲಕ್ಷ್ಮಿ ಹಾರ ಹಾಕುತ್ತಾಳೆ ಎಂದು ಕಾದು ನೋಡಬೇಕಿದೆ.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮತ್ತು ಪದ್ಮರಾಜ್ ಆರ್. ಇಬ್ಬರೂ ಹೊಸ ಮುಖಗಳಾಗಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಇಬ್ಬರೂ ರಾಜಕೀಯದಲ್ಲಿ ಪಳಗಿದವರು.
ಆಂತರಿಕ ಸಮೀಕ್ಷೆಯ ವಿಶ್ವಾಸ ಬಿಜೆಪಿ ಮತಗಟ್ಟೆಸಮೀಕ್ಷೆ ಮೇಲೆ ವಿಶ್ವಾಸವಿರಿಸಿದ್ದರೆ, ಕಾಂಗ್ರೆಸ್ಸಿಗರು ಆಂತರಿಕ ಸಮೀಕ್ಷೆಯನ್ನು ತಿರಸ್ಕರಿಸಿದ್ದಾರೆ.
ಕಾಂಗ್ರೆಸ್ ಆಂತರಿಕ ಸಮೀಕ್ಷೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದು, ಇದರಲ್ಲಿ ಉಡುಪಿಯಲ್ಲಿ ಜಯಪ್ರಕಾಶ್ ಹೆಗ್ಡೆ ಗೆಲುವು ಪಕ್ಕಾ ಎಂದೇ ಕಾಂಗ್ರೆಸ್ಸಿಗರು ಲೆಕ್ಕ ಹಾಕುತ್ತಿದ್ದಾರೆ.
ಮತದಾನ ಶನಿವಾರ ಮುಗಿದು ಮತಗಟ್ಟೆ ಸಮೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ಬಹುತೇಕ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ ಡಿಎಗೆ ಬಹುಮತದ ಸಂಖ್ಯೆಯನ್ನು ನೀಡಿದೆ. ಇದರಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಕಾರ್ಯಕರ್ತರು, ಬಿಜೆಪಿಯ ಬ್ರಿಜೇಶ್ ಚೌಟ ವಿಜಯ ಖಚಿತ ಎಂದೇ ನಂಬಿ ಬೆಟ್ಟಿಗ್ ಕಟ್ಟುತ್ತಿರುವುದು ಕಂಡು ಬಂದಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮದೇ ಅಭ್ಯರ್ಥಿ ಗೆಲ್ಲುವಿನ ನಿರೀಕ್ಷೆಯಲ್ಲಿದ್ದಾರೆ.
ಇನ್ನೊಂದೆಡೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಸೋಲು, ಗೆಲುವಿನ ಲೆಕ್ಕಾಚಾರವೂ ಕುತೂಹಲ ಘಟ್ಟ ತಲುಪಿದೆ. ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನೊಳಗೊಂಡ ಕಣದಲ್ಲಿ ಅಭ್ಯರ್ಥಿಗಳಿದ್ದರೂ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ನಿಂದ ಕೆ. ಜಯಪ್ರಕಾಶ್ ಹೆಗ್ಡೆ ಅವರಲ್ಲಿ ಯಾರು ದಿಲ್ಲಿಗೆ ತೆರಳುವ ಲಕ್ಕಿ ಎನ್ನುವ ಪ್ರಶ್ನೆಗೆ ಮತ ಎಣಿಕೆ ಸ್ಪಷ್ಟ ಉತ್ತರ ನೀಡಲಿದೆ.
ಬಿಜೆಪಿ ಲೆಕ್ಕಾಚಾರ ಪ್ರಕಾರ ಕೋಟ ಶ್ರೀನಿವಾಸ ಪೂಜಾರಿ 1.50ಲಕ್ಷ ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಇದ್ದು, ಕಾಂಗ್ರೆಸ್ ಲೆಕ್ಕಾಚಾರ ಪ್ರಕಾರ ಕೆ.ಜಯಪ್ರಕಾಶ್ ಹೆಗ್ಡೆ 40ರಿಂದ 50ಸಾವಿರ ಮತಗಳ ಅಂತರದ ಗೆಲುವು ಶಾಧಿಸುತ್ತಾರೆ ಎಂಬ ನಂಬಿಕೆ ಇದೆ.
ಬಿಜೆಪಿ ಅಭ್ಯರ್ಥಿಗಳಿಬ್ಬರಿಗೆ ಮೋದಿ ಬಲವಾದರೆ, ಕಾಂಗ್ರೆಸ್ ಅಭ್ಯರ್ಥಿಗಳು ಪ್ರಸ್ತುತ ಸಮಸ್ಯೆಗಳ ಬಗ್ಗೆ ಮತ್ತು ಕರ್ನಾಟಕ ಸರಕಾರದ ಗ್ಯಾರಂಟಿ ಬಲದಲ್ಲಿ ಮತಯಾಚನೆ ಮಾಡಿದ್ದಾರೆ.
ಇದೀಗ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗೆದ್ದು ದಿಲ್ಲಿಗೆ ತೆರಳುವ ನಾಯಕನಾರು ಎಂದು ನಾ:ಳೆ ತೀರ್ಮಾನವಾಗಲಿದೆ.

