ಕಟೀಲು ನುಡಿಹಬ್ಬ : “ಹಕ್ಕಿ ಹಾರುತಿದೆ ನೋಡಿದಿರಾ” ಗೋಷ್ಟಿಯಲ್ಲಿ ಹಕ್ಕಿಗಳ ಬಗ್ಗೆ ರಜನಿ ರಾವ್ ಮಾಹಿತಿ.
ಅಚ್ಚರಿ ಹುಟ್ಟಿಸುವ ಹಕ್ಕಿಗಳ ಪ್ರಪಂಚ – ರಜನಿ ರಾವ್
(Kateel) ಕಟೀಲು: ಕಣ್ಣಿಗೆ ಹಕ್ಕಿಗಳು ಕಾಣುತ್ತಿದ್ದರೂ ನಾವು ಅವುಗಳ ಬಗ್ಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಅವುಗಳ ಬಗ್ಗೆ ಕುತೂಹಲದಿಂದ ಗಮನಿಸಿದರೆ ಅನೇಕ ಸಂಗತಿಗಳು ನಮ್ಮನ್ನೇ ಅಚ್ಚರಿಗೊಳಿಸುತ್ತವೆ. ಕರಾವಳಿಯ ಈ ಭಾಗದಲ್ಲಿ 438 ಪ್ರಬೇಧದ ಹಕ್ಕಿಗಳು ಇದ್ದು, ಪ್ರತಿ ವರ್ಷ ಈ ಭಾಗದಲ್ಲಿ 76 ಜಾತಿಯ ಹಕ್ಕಿಗಳು ಬರುತ್ತವೆ. ಸಸಿಹಿತ್ಲು ಪ್ರದೇಶದಲ್ಲಿ 154 ಜಾತಿ ಹಕ್ಕಿಗಳು ಇವೆ ಎಂದು ಒಂದು ಅಧ್ಯಯನ ಹೇಳುತ್ತದೆ ಎಂದು ಹಕ್ಕಿಗಳ ವೀಕ್ಷಣೆಯ ಖ್ಯಾತ ಮಾರ್ಗದರ್ಶಿ ದಾಂಡೇಲಿಯ ರಜನಿ ರಾವ್ ಹೇಳಿದರು.
ಅವರು ಕಟೀಲು ನುಡಿಹಬ್ಬದಲ್ಲಿ “ಹಕ್ಕಿ ಹಾರುತಿದೆ ನೋಡಿದಿರಾ” ಗೋಷ್ಟಿಯಲ್ಲಿ ಹಕ್ಕಿಗಳ ಕುರಿತು ಮಾತನಾಡಿದರು.
ಕಟೀಲಿನಲ್ಲಿ ಗಮನಿಸಿದಾಗ ಹದಿನೈದು ಪ್ರಬೇಧದ ಹಕ್ಕಿಗಳು ಕಂಡುಬಂದಿವೆ ಎಂದ ಅವರು, ಭಾರತದಲ್ಲಿ ದಟ್ಟ ಕಾಡು ಇದ್ದು ಹಾರ್ನ್‌ವಿಲ್ ಹಕ್ಕಿಗಳು ಯಥೇಚ್ಛವಾಗಿ ಕಾಣುತ್ತವೆ. ಹಕ್ಕಿಗಳು ರೈತನ ಮಿತ್ರನೂ ಹೌದು ಎಂದರು.
ಹೆಣ್ಣು ಹಕ್ಕಿ ಗಂಡು ಹಕ್ಕಿಯನ್ನು ಆಯ್ಕೆ ಮಾಡಲು ತುಂಬ ಯೋಚನೆ ಮಾಡುತ್ತದೆ. ಗಂಡನ್ನು ಆಯ್ಕೆ ಮಾಡಿದ ಮೇಲೆ ಮತ್ತೆ ಇನ್ನೊಂದನ್ನು ಗಮನಿಸುವುದಿಲ್ಲ.
ಮಂಗಟ್ಟೆ ಹಕ್ಕಿ 40 ರಿಂದ 80 ಕಿಲೋ ಮೀಟರ್ ದೂರ ಹೋಗಿ ತನ್ನ ಸಂಗಾತಿಗೆ ಹಣ್ಣನ್ನು ತರುವ ಗಂಡು ಹಕ್ಕಿ, 140 ಹಣ್ಣನ್ನು ಗಂಟಲಿನಿಂದ ತೆಗೆದು ಕೊಟ್ಟ ದಾಖಲೆ ಇದೆ.
ಹಕ್ಕಿಗಳ ಜೀವನ ಕುತೂಹಲಕಾರಿ. ನಾವೂ ಕೂಡ ಹಕ್ಕಿಗಳ ರೀತಿ ನಿರಂತರ ಕೆಲಸ ಮಾಡುತ್ತಲೇ ಇರಬೇಕು. ಬದುಕಬೇಕೆಂದರೆ ಸ್ವತಂತ್ರವಾಗಿ ಬೆಳೆಯಬೇಕು. ಶ್ರಮ ವಹಿಸಬೇಕು ಎನ್ನುವುದನ್ನು ಹಕ್ಕಿಗಳ ಬದುಕಿನಿಂದ ಕಲಿಯಬೇಕು ಎಂದು ರಜನಿ ರಾವ್ ಹೇಳಿದರು.

