ಎರಡು ತಿಂಗಳಿಂದ ಜನರ ಕೈಗೂ, ಕಾರ್ಯಕರ್ತರ ಕೈಗೂ ಸಿಗದ ಉಡುಪಿ ಉಸ್ತುವಾರಿ ಮಂತ್ರಿ
ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ವ್ಯಾಮೋಹಕ್ಕೆ ಉಡುಪಿ ಜಿಲ್ಲೆ ಅನಾಥ
ಕಾಂಗ್ರೆಸ್ ಕಾರ್ಯಕರ್ತರಿಂದ ಗೋ ಬ್ಯಾಕ್ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ
(Udupi) ಉಡುಪಿ: ಉಡುಪಿ ಜಿಲ್ಲೆ ಹೆಚ್ಚಿನ ಸಲ ‘ಹೊರಗಡೆಯ’ ಉಸ್ತುವಾರಿ ಸಚಿವರನ್ನೇ ಕಂಡ ನತದೃಷ್ಟ ಜಿಲ್ಲೆ. ಈಗ ಇರುವ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಹೊರ ಜಿಲ್ಲೆಯವರೇ. ಪ್ರತೀ ಬಾರಿ ಹೊರ ಜಿಲ್ಲೆಯವರು ಇಲ್ಲಿ ಉಸ್ತುವಾರಿಯಾಗಲು ಕಾರಣ ಕರಾವಳಿ ಬಿಜೆಪಿಯ ಭದ್ರಕೋಟೆ! ಅಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆ ಆದಾಗಲೆಲ್ಲ ಇಲ್ಲಿ ಗೆದ್ದ ಶಾಸಕರು ಬಿಜೆಪಿಯವರೇ. ಹೀಗಾಗಿ ಅನಿವಾರ್ಯವಾಗಿ ಇಲ್ಲಿ ಹೊರ ಜಿಲ್ಲೆಯವರನ್ನು ಉಸ್ತುವಾರಿ ಮಾಡಬೇಕಾದ ಸಂಕಟ ಕಾಂಗ್ರೆಸ್ ಪಕ್ಷದ್ದು.
ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿ ಜಿಲ್ಲೆಗೆ ಉಸ್ತುವಾರಿ ಸಚಿವೆಯಾಗಿ ಆಯ್ಕೆ ಆಗುತ್ತಿದ್ದಂತೆ ಉಡುಪಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಂದು ಹುಮ್ಮಸ್ಸಿನ ವಾತಾವರಣ ಸೃಷ್ಟಿಯಾಗಿದ್ದು ನಿಜ. ಆದರೆ ಈ ಹುಮ್ಮಸ್ಸು ಬಹುಕಾಲ ಉಳಿಯಲಿಲ್ಲ. ಬೆಳಗಾವಿಯಲ್ಲಿರುವ ಸಚಿವೆ ಎರಡು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಉಡುಪಿಗೆ ‘ಪ್ರವಾಸ’ ಮಾಡುತ್ತಿದ್ದರು. ಆದರೆ ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಹೆಬ್ಬಾಳ್ಕರ್ ಇಲ್ಲಿಗೆ ಒಮ್ಮೆಯೂ “ಪ್ರವಾಸ” ಮಾಡಿಲ್ಲ .ಕಾರಣ, ಪುತ್ರನಿಗೆ ಲೋಕಸಭೆ ಟಿಕೆಟ್ ಸಿಕ್ಕಿದ್ದು!
ಪುತ್ರ ಮೃಣಾಲ್ ಗೆ ಟಿಕೆಟ್ ಸಿಕ್ಕಿದ ಬಳಿಕ ಉಸ್ತುವಾರಿ ಸಚಿವೆ ಲಕ್ಷ್ಮೀ ಇತ್ತ ಪಕ್ಷದ ಕಾರ್ಯಕರ್ತರ ಕೈಗೂ ಸಿಕ್ಕಿಲ್ಲ. ಜಿಲ್ಲೆಯ ಜನರ ಕೈಗೂ ಸಿಕ್ಕಿಲ್ಲ.
ಲೋಕಸಭೆ ಚುನಾವಣೆ ಸಂದರ್ಭ ಪುತ್ರನ ಪರ ಇಡೀ ಬೆಳಗಾವಿ ಕ್ಷೇತ್ರ ಸುತ್ತಿದ ಸಚಿವೆ, ಇತ್ತಕಡೆ ಒಮ್ಮೆಯೂ ಬಂದಿಲ್ಲ. ಸರಿ, ಚುನಾವಣೆ ಮುಗಿದ ಮೇಲೂ ಫಲಿತಾಂಶಕ್ಕೆ ಒಂದು ತಿಂಗಳು ಕಾಲಾವಕಾಶ ಇತ್ತು. ಆ ಸಂದರ್ಭದಲ್ಲೂ ಸಚಿವೆ ಇತ್ತ ತಲೆ ಹಾಕಿಯೂ ಇಲ್ಲ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆ ಪರ ಮತ ಯಾಚಿಸಲೂ ಸಚಿವೆ ಬಂದಿಲ್ಲ. ಕಾರ್ಯಕರ್ತರನ್ನು ಭೇಟಿಯಾಗಿ ಹುರಿದುಂಬಿಸಲೂ ಬಂದಿಲ್ಲ. ಇದಕ್ಕೆಲ್ಲ ಕಾರಣ, ಸಚಿವೆಯ ಪುತ್ರ ವಾತ್ಸಲ್ಯ ಕಾರಣ ಎಂದು ಕೈ ಕಾರ್ಯಕರ್ತರು ಮಾತನಾಡತೊಡಗಿದ್ದಾರೆ.
೪ ತಾರೀಕಿಗೆ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಸಚಿವೆಯ ಪುತ್ರ ಸೋಲನುಭವಿಸಿದ್ದಾರೆ. ಇನ್ನು ಮುಂದಾದರೂ ಅವರು ಜಿಲ್ಲೆಗೆ ಬಂದು ಜನರ ಅಹವಾಲು ಮತ್ತು ಪಕ್ಷದ ಕಾರ್ಯಕರ್ತರ ಮನವಿ ಕೇಳಿಸಿಕೊಳ್ಳುತ್ತಾರೋ ಕಾದು ನೋಡಬೇಕು.

