ಉಡುಪಿ: ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸುವುದಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸೋಲಿನ ಪರಾಮರ್ಶೆ ನಡೆಸ್ತೀವಿ: ಜಿ.ಪರಮೇಶ್ವರ್ ಸ್ಪಷ್ಟನೆ
(Udupi) ಉಡುಪಿ: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಅದನ್ನು ರಾಜಕೀಯ ಕಾರಣಕ್ಕಾಗಿ ನಾವು ಪ್ರಾರಂಭಿಸಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (Home minister Dr. G Parameshwar) ಸ್ಪಷ್ಟಪಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪಟ್ಟಣ ಪ್ರದೇಶದಲ್ಲಿ ಗ್ಯಾರಂಟಿ ಯೋಜನೆಗಳು ಎಷ್ಟು ಉಪಯೋಗ ಆಗುತ್ತೋ ಗೊತ್ತಿಲ್ಲ. ಆದರೆ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಉಪಯೋಗ ಆಗುತ್ತಿದೆ. ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಗ್ಯಾರಂಟಿ ಯೋಜನೆಯಿಂದ ತುಂಬಾ ಅನುಕೂಲವಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಲೋಕಸಭೆ ಚುನಾವಣೆ ಸೋಲಿನ ಪರಾಮರ್ಶೆ ನಡೆಸುತ್ತೇವೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದೇವೆ. ಸೋಲಿನ ಪರಾಮರ್ಶೆ ಗಾಗಿ ಸಮಿತಿಯನ್ನು ರಚಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ. ಸಮಿತಿ ಮೂಲಕ ಸೋಲಿಗೆ ಕಾರಣ ಏನು ಎಂಬ ಬಗ್ಗೆ ವಿಚಾರ ಮಾಡುತ್ತೇವೆ ಎಂದು ಜಿ. ಪರಮೇಶ್ವರ್ ಹೇಳಿದ್ದಾರೆ.
ಈ ಸಂದರ್ಭ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಕೊಡವೂರು ಮತ್ತಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

