ಇವಿಎಂ ಹ್ಯಾಕ್ ಸಾಧ್ಯತೆ: ಎಲಾನ್ ಮಸ್ಕ್̈
(New Dhelhi) ನವದೆಹಲಿ: ಕೃತಕ ಬುದ್ಧಿಮತ್ತೆ ಅಥವಾ ಮನುಷ್ಯರಿಂದ ಇವಿಎಂ ಹ್ಯಾಕ್ ಆಗುವ ಸಾಧ್ಯತೆಗಳು ಇದ್ದು, ಅದನ್ನು ನಿಷೇಧಿಸಬೇಕು ಎಂದು ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್, ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಅಲನ್ ಮಸ್ಕ್ ನೀಡಿರುವ ಹೇಳಿಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಭಾರತದ ವಿಪಕ್ಷ ನಾಯಕರೂ ಇದಕ್ಕೆ ದನಿಗೂಡಿಸಿದ್ದಾರೆ.
ಮಾಧ್ಯಮ ವರದಿಯ ಬಗ್ಗೆ ಪೋಸ್ಟ್ ಮಾಡಿದ್ದ ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರು, “ಅಸೋಸಿಯೇಟೆಡ್ ಪ್ರೆಸ್ ಪ್ರಕಾರ ಪೋರ್ಟೊರಿಕೊದ ಪ್ರಾಥಮಿಕ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಿಗೆ ಸಂಬಂಧಿಸಿದ ನೂರಾರು ಅಕ್ರಮಗಳು ನಡೆದಿವೆ. ಅದೃಷ್ಟವಶಾತ್, ಪೇಪರ್ ಟ್ರಯಲ್ ಇದ್ದುದರಿಂದ ಸಮಸ್ಯೆಯನ್ನು ಗುರುತಿಸಿ ಮತ ಎಣಿಕೆಯನ್ನು ಸರಿಪಡಿಸಲಾಗಿದೆ. ಪೇಪರ್ ಟ್ರಯಲ್ ಇಲ್ಲದಿದ್ದರೆ ಏನಾಗಬಹುದು?” ಎಂದು ಪ್ರಶ್ನಿಸಿದ್ದರು.
ಜೂನ್ 2 ರಂದು ನ್ಯೂ ಪ್ರೋಗ್ರೆಸಿವ್ ಪಾರ್ಟಿ ಮತ್ತು ಪಾಪ್ಯುಲರ್ ಡೆಮಾಕ್ರಟಿಕ್ ಪಾರ್ಟಿಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪೋರ್ಟೊ ರಿಕೊದಲ್ಲಿ ಪ್ರಾಥಮಿಕ ಚುನಾವಣೆ ನಡೆದಿತ್ತು. ಮತ ಎಣಿಕೆಯ ಬಳಿಕ ಎರಡೂ ಪಕ್ಷಗಳು ಬ್ಯಾಲೆಟ್ ಪೇಪರ್ ತಪ್ಪಾದ ಫಲಿತಾಂಶ ತೋರಿಸಿದೆ ಎಂದು ಹೇಳಿಕೊಂಡಿವೆ. ಪಿಎನ್‌ಪಿ 700 ದೋಷಗಳ ಬಗ್ಗೆ ವರದಿ ಮಾಡಿದ್ದು, ಪಿಪಿಡಿ 350 ವ್ಯತ್ಯಾಸಗಳನ್ನು ತೋರಿಸಿದೆ ಎಂದು ಹೇಳಲಾಗಿದೆ.
ಎಲಾನ್ ಮಸ್ಕ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, “ಚೆನ್ನಾಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಇವಿಎಂಗಳ ಬಗ್ಗೆ ಇವರಿಗೆ ಕಲಿಸಿಕೊಡುವ ಅಗತ್ಯತೆಯಿದೆ” ಎಂದು ಅಲನ್‌ಮಸ್ಕ್‌ರವರಿಗೆ ಟಾಂಗ್ ನೀಡಿದ್ದಾರೆ.

