ಜುಮಾದಿ ಕಟ್ಟೆಯಲ್ಲಿ ಕಣ್ಮನ ಸೆಳೆಯುತ್ತಿರುವ ಬೃಹತ್ ಗೂಡುದೀಪ.
ವಿಶೇಷ ರೀತಿಯಲ್ಲಿ ದೀಪಾವಳಿ ಶುಭಕೋರಿದ ಪಂಚ ಜುಮಾದಿ ಆಡಳಿತ ಮಂಡಳಿ.
(Kodavooru) ಕೊಡವೂರು: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದ ಅಂಗವಾಗಿ ಕೊಡವೂರು ಜುಮಾದಿ ನಗರದ ಜುಮಾದಿ ಕಟ್ಟೆಯ ಪರಿಸರದಲ್ಲಿ ಅಳವಡಿಸಲಾಗಿರುವ ಆಕರ್ಷಕ ಬೃಹತ್ ಗೂಡುದೀಪವು ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ.
ಜುಮಾದಿ ನಗರ ಆಡಳಿತ ಮಂಡಳಿ, ಸೇವಾ ಟ್ರಸ್ಟ್ ಹಾಗೂ ಮಾತೃ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಈ ವಿಶೇಷ ಗೂಡುದೀಪವನ್ನು ಸ್ಥಾಪಿಸಲಾಗಿದ್ದು, ಈ ಮೂಲಕ ಸಮಸ್ತ ನಾಗರಿಕರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಲಾಗಿದೆ.
ತಮ್ಮ ಅಪೂರ್ವ ಕೈಚಳಕದ ಮೂಲಕ ಈ ಸುಂದರ ಹಾಗೂ ಕಲಾತ್ಮಕ ಬೃಹತ್ ಗೂಡುದೀಪವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿಕೊಟ್ಟ ಊರಿನ ಹೆಮ್ಮೆಯ ಕಲಾವಿದರಾದ ಅಶೋಕ್ ಶೆಟ್ಟಿಗಾರ್ ಅವರಿಗೆ ಜುಮಾದಿ ನಗರ ಆಡಳಿತ ಮಂಡಳಿ, ಸೇವಾ ಟ್ರಸ್ಟ್, ಮಾತೃ ಮಂಡಳಿ ಹಾಗೂ ಊರ ಸಮಸ್ತ ನಾಗರಿಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಗಿದೆ.
ಈ ದೀಪಾವಳಿಯ ಬೆಳಕು ನಾಡಿನ ಸಮಸ್ತ ಜನರ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಹೊತ್ತು ತರಲಿ ಎಂದು ಜುಮಾದಿ ನಗರ ಆಡಳಿತ ಮಂಡಳಿ ಹಾಗೂ ಸೇವಾ ಟ್ರಸ್ಟ್ ಪ್ರಕಟಣೆಯಲ್ಲಿ ಹಾರೈಸಿದೆ.

