ಉಡುಪಿ: ಶ್ರೀ ಕೃಷ್ಣಮಠದಲ್ಲಿ ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ

(Udupi) ಉಡುಪಿ: ಕಡೆಗೋಲು ಕೃಷ್ಣನ ನೆಲೆವೀಡು ಉಡುಪಿಯಲ್ಲಿ ಎಲ್ಲೆಲ್ಲೂ ಕೃಷ್ಣನ ಭಕ್ತಿ ಪರಕಾಷ್ಟೆ ಮುಟ್ಟಿದೆ. ಸೋಮವಾರ ಶ್ರೀ ಕೃಷ್ಣಮಠದಲ್ಲಿ ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ನಾಳೆ (ಮಂಗಳವಾರ) ರಥ ಬೀದಿಯಲ್ಲಿ ವಿಜೃಂಭಣೆಯ ಮೊಸರುಕುಡಿಕೆ ಉತ್ಸವ ನಡೆಯಲಿದೆ.
ಪರ್ಯಾಯ ಪುತ್ತಿಗೆ ಮಠದ ಶ್ರೀ ಸುುಣೇಂದ್ರ ತೀರ್ಥರು ಬಾಲಕೃಷ್ಣನಿಗೆ ವಿವಿಧ ಅಲಂಕಾರ, ಮಹಾಪೂಜೆ, ನೈವೇದ್ಯಗಳನ್ನು ನಡೆಸಿದರು. ಇಂದು ಮಧ್ಯರಾತ್ರಿ 12.08 ಗಂಟೆಗೆ ಶ್ರೀಗಳಿಂದ ಅರ್ಘ್ಯಪ್ರದಾನ ಮಾಡುವುದರೊಂದಿಗೆ ಕೃಷ್ಣನ ಹುಟ್ಟುಹಬ್ಬದ ಆಚರಣೆ ಸಂಪ್ರದಾಯದಂತೆ ನಡೆಯಲಿದೆ.
ಬಾಲಕೃಷ್ಣನ ತೊಟ್ಟಿಲು ತೂಗುವ ಡೋಲೋತ್ಸವ ನಡೆಯಿತು. ಮಧ್ವಮಂಟದಲ್ಲಿ ತೊಟ್ಟಿಲಿನಲ್ಲಿ ಬಾಲಕೃಷ್ಣನಿಗೆ ಪೂಜೆ ನೆರವೇರಿಸಿ, ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥರೊಂದಿಗೆ ಕೃಷ್ಣನ ತೊಟ್ಟಿಲು ತೂಗಿ ಡೋಲೊತ್ಸವಕ್ಕೆ ಚಾಲನೆ ನೀಡಿದರು.
ಸಾರ್ವಜನಿಕರಿಗೂ ಕೃಷ್ಣನ ತೊಟ್ಟಿಲು ತೂಗುವ ಸೇವೆಯ ಅಪೂರ್ವ ಅವಕಾಶವನ್ನು ಒದಗಿಸಲಾಗಿತ್ತು.
ಉಡುಪಿಯ ಬೀದಿಬೀದಿಗಳನ್ನು ಕೃಷ್ಣನ ದರ್ಶನವಾಗುತಿತ್ತು. ತಾಯಂದಿರುವ ತಮ್ಮ ಮಕ್ಕಳಿಗೆ ಮುದ್ದುಕೃಷ್ಣನ ನಾನಾಬಗೆಯ ವೇಷಗಳನ್ನು ಹಾಕಿ ಕೃಷ್ಣಮಠದಲ್ಲಿ ನಡೆಯುವ ಮುದ್ದುಕೃಷ್ಣ ವೇಷ ಸ್ಪರ್ಧೆಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಪುತ್ತಿಗೆ ಶ್ರೀದ್ವಯರು ಕೃಷ್ಣವೇಷಧಾರಿ ಮಕ್ಕಳನ್ನು ಎತ್ತಿ ತೊಡೆಯ ಮೇಲೆ ಕುಳ್ಳಿರಿಸಿ ಸಂಭ್ರಮಿಸಿದರು.
ತಾಸೆಯ ಸದ್ದಿನೊಂದಿಗೆ ಬೀದಿಬೀದಿಗಳಲ್ಲಿ ಹತ್ತಾರು ಹುಲಿವೇಷ ತಂಡಗಳು ಕುಣಿದವು. ಪ್ರಸಿದ್ಧ ಮಾರ್ಪಳ್ಳಿ, ನಿಟ್ಟೂರು, ಕಾಡಬೆಟ್ಟು, ಕೊರಂಗ್ರಪಾಡಿ, ಮಲ್ಪೆ ಇತ್ಯಾದಿ ಹುಲಿವೇಷ ತಂಡಗಳು ಪೈಪೋಟಿಯಲ್ಲಿ ಬೀದಿಗಿಳಿದು ಅಬ್ಬರಿಸುತ್ತಿದವು.
ಈ ಬಾರಿಯೂ ದರ್ಪಣ ನೃತ್ಯ ಸಂಸ್ಥೆಯ ಬಾಲಕಿಯರು ಮತ್ತು ಯುವತಿಯರು ಹುಲಿವೇಷವನ್ನು ಧರಿಸಿದ್ದು, ಈ ಹೆಣ್ಣು ಹುಲಿಗಳು ಮೊಸರು ಕುಡಿಕೆಯ ವಿಶೇಷ ಆಕರ್ಷಣೆಯಾಗಲಿವೆ.

