ಹೋಂ ಸ್ಟೇ, ರೆಸಾರ್ಟ್ ಗಳಿಂದ ಊರಿನ ಪರಂಪರೆಗೆ ಧಕ್ಕೆ – ಭಜನಾ ಮಂದಿರಗಳ ಒಕ್ಕೊರಲ ಅಭಿಪ್ರಾಯ
(Udupi) ಉಡುಪಿ: ಕಳೆದ ನಾಲ್ಕೈದು ವರ್ಷಗಳಿಂದ ಹೋಂಸ್ಟೇ ಮತ್ತು ರೆಸಾರ್ಟ್‌ಗಳಿಂದ, ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಂದ, ಊರಿನ ಪರಂಪರೆಗೆ, ಭಜನಾ ಮಂದಿರಗಳ ಪಾವಿತ್ರ್ಯತೆಗೆ ಸತತ ಧಕ್ಕೆಯಾಗುತ್ತಿರುವುದನ್ನು ಮನಗಂಡು ಮಲ್ಪೆಯಿಂದ ಕಾಪು ತನಕದ ಎಲ್ಲಾ ಭಜನಾ ಮಂದಿರಗಳ ಸಹಿತವಾಗಿ ಒಟ್ಟು 35 ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಾತೃ ಮಂಡಳಿಗಳ ಸದಸ್ಯರು ಹಾಗೂ ಊರ ನಾಗರಿಕರು ಸೇರಿ ಇದಕ್ಕೆ ತಡೆಯೊಡ್ಡಬೇಕೆಂದು ಒಕ್ಕೊರಲ ಅಭಿಪ್ರಾಯ ಮಂಡಿಸಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಕೊಟ್ಟರೂ, ಯಾವುದೇ ಫಲ ಇಲ್ಲದಾಗ, ಊರಿನ ನಾಗರಿಕರು ಮುಂದಿನ ಪ್ರಬಲ ಹೋರಾಟಕ್ಕೆ ಪೂರ್ವಭಾವಿಯಾಗಿ ಸರ್ವಸಂಸ್ಥೆಯ ನೇತೃತ್ವದಲ್ಲಿ ಬ್ರಹತ್ ಸಭೆಯನ್ನು ಆಯೋಜಿಸಿದ್ದರು.
ಈ ಬ್ರಹತ್ ಸಭೆಯಲ್ಲಿ ಮಲ್ಪೆ ಮಲ್ಪೆಯಿಂದ ಕಾಪು ತನಕದ ಎಲ್ಲಾ ಭಜನಾ ಮಂದಿರಗಳ ಸಹಿತವಾಗಿ ಒಟ್ಟು 35 ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಾತೃಮಂಡಳಿಗಳ ಸದಸ್ಯರು ಹಾಗೂ ಊರ ನಾಗರಿಕರು ಸೇರಿದ್ದರು.
ಎಲ್ಲಾ ಭಜನಾಮಂದಿರಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಅನಾದಿ ಕಾಲದಿಂದ ಮೀನುಗಾರಿಕೆಯನ್ನೇ ನಂಬಿ ಭಜನಾ ಮಂದಿರಗಳ ನೆಲೆಯಲ್ಲಿ ಬದುಕು ಕಟ್ಟಿಕೊಂಡಿರುವ ಅಪೂರ್ವ ಸಂಸ್ಕೃತಿಯ ಊರು ನಮ್ಮದು. ಇತ್ತೀಚಿನ ಕೆಲ ವರ್ಷಗಳಿಂದ ಹೋಂಸ್ಟೇ ಮತ್ತು ರೆಸಾರ್ಟ್‌ಗಳಿಗೆ ಬರುವ ಪ್ರವಾಸಿಗರಿಂದಾಗಿ ನಮ್ಮ ಪರಂಪರೆಗೆ ಅಪಾರವಾದ ಹಾನಿಯಾಗಿದೆ. ಇನ್ನೂ ನಾವು ಸುಮ್ಮನೆ ಕುಳಿತರೆ ಕೇರಳದ ವಯನಾಡಿನಂತೆ ಊರು ಸರ್ವನಾಶವಾಗುವುದು ಖಂಡಿತ. ಕೊನೆಯ ಎಚ್ಚರಿಕೆಯ ಪ್ರತೀಕವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಎಲ್ಲಾ ಮಂದಿರಗಳೂ ಸೇರಿ ಮನವಿಯನ್ನು ನೀಡೋಣ. ಅದಕ್ಕೆ ಸರಿಯಾದ ಪ್ರತಿಕ್ರಿಯೆ ಸಿಗದೇ ಹೋದರೆ ನಾವು ಬ್ರಹತ್ ಪ್ರತಿಭಟನೆಗೆ ಸಿದ್ಧರಾಗೋಣ ಎಂದು ಒಕ್ಕೊರಲ ಅಭಿಪ್ರಾಯ ಸಭೆಯಲ್ಲಿ ಮಂಡನೆಯಾಯಿತು.

