ಎಮ್11; ಘಟಕ ಸಮಸ್ಯೆ ಪರಿಹಾರಕ್ಕೆ ಗಡುವು – ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಚೇರ್ಮೆನ್ ಡಾ. ಶಾಂತ್ ಎ. ತಿಮ್ಮಯ್ಯ ಆದೇಶ
(Nandikuru) ನಂದಿಕೂರು: ನಂದಿಕೂರು ಎಸ್ಇಝಡ್ ಕೈಗಾರಿಕಾ ಪ್ರಾಂಗಣದಲ್ಲಿ ಕಾರ್ಯಾಚರಿಸುತ್ತಿರುವ ಬಯೋ ಡೀಸಿಲ್ ಉತ್ಪಾದನಾ ಘಟಕ ಎಮ್11 ಕೈಗಾರಿಕೆಯಿಂದ ಆಗುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಚೇರ್ಮೆನ್ ಡಾ. ಶಾಂತ್ ಎ.ತಿಮ್ಮಯ್ಯ ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.
ಘಟಕದ ಸುತ್ತಲಿನ ಗ್ರಾಮಗಳಲ್ಲಿ ಎಮ್11 ನಿಂದ ಹಾನಿಕಾರಕ ದುರ್ವಾಸನೆ ಹಾಗೂ ಬಾವಿ ನೀರು ಕಲುಷಿತ ಬಗ್ಗೆ ಸ್ಥಳೀಯರು ರಾಜ್ಯ ಪರಿಸರ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದರು.
ಸುದೀರ್ಘ ಅವಧಿಯಲ್ಲಿ ಘಟಕವನ್ನು ಅಮೂಲಾಗ್ರ ಪರಿಶೀಲನೆ ನಡೆಸಿದ ಬಳಿಕ ಅವರು ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಭೇಟಿ ನೀಡಿ, ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾತನಾಡಿದರು.
ಇಲ್ಲಿನ ಸಮಸ್ಯೆಯ ಬಗೆಗಿನ ದೂರನ್ನು ಗಮನಿಸಿ ಸ್ಥಳ ಪರಿಶೀಲನೆಗೆ ಬಂದಿದ್ದೇನೆ. ಈಗಾಗಲೇ ಘಟಕದಲ್ಲಿ ಸಮಸ್ಯೆ ಇರುವುದನ್ನು ಕಂಡು ಅವರ ರಿಫೈನರಿ ಘಟಕವನ್ನು ಮುಚ್ಚಲಾಗಿದೆ. ಬಯೋಡೀಸಿಲ್ ಘಟಕ ಉತ್ಪಾದನೆ ನಡೆಸುತ್ತಿದೆ. ರಿಫೈನರಿ ಘಟಕ ಪುನರಾರಂಭಿಸಲು ಆಧುನಿಕ ಕ್ಲೋಸ್ಡ್ ತಂತ್ರಜ್ಞಾನ ಬಳಸಬೇಕು. ಯಾವುದೇ ಕಾರಣಕ್ಕೂ ದುರ್ವಾಸನೆ ಹೊರ ಸೂಸಬಾರದು. ಕರಾವಳಿ ಭಾಗದಲ್ಲಿ ಅಧಿಕ ಮಳೆಯಿಂದ ಹರಿಯುವ ನೀರು ದೂರ ಸಾಗಿಹೋಗುತ್ತದೆ. ಎಮ್11 ಘಟಕದಲ್ಲಿ ಆಯಿಲ್ ಉತ್ಪಾದನೆ ಮಾಡುವ ಕಾರಣ ಘಟಕದಿಂದ ಒಂದು ಬಿಂದು ನೀರೂ ಹೊರ ಹೋಗಬಾರದು. ಅಂತಹ ತಂತ್ರಜ್ಞಾನವನ್ನು ತಕ್ಷಣ ಅಳವಡಿಸಬೇಕು. ನಿಗದಿತ ಸಮಯದೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಕಾನೂನು ಪ್ರಕಾರ ಘಟಕದ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದವರು ಹೇಳಿದರು.
ಮುಂದೆ ದುರ್ವಾಸನೆ ಕಂಡು ಬಂದಲ್ಲಿ ನೋಯ್ಡಾದಲ್ಲಿರುವ ದುರ್ವಾಸನೆ ವಾಸನೆ ಪರಿಶೀಲನಾ ಸಂಸ್ಥೆಯನ್ನು ಕರೆಸಿ ಪರಿಶೀಲನೆ ನಡೆಸಲಾಗುವುದು ಎಂದವರು ಹೇಳಿದರು.
ಇದೇ ಸಂದರ್ಭ ಸ್ಥಳೀಯ ವಾಸಿ ಜ್ಯೋತಿ ನಾಗರಾಜ ರಾವ್ ಎಂಬವರು ಘಟಕದಿಂದ ತಮಗಾದ ಗಂಭೀರ ಸಮಸ್ಯೆಯ ಬಗ್ಗೆ ವಿವರಿಸಿದರು.
ಹಿರಿಯರಾದ ಲಕ್ಷ್ಮಣ ಶೆಟ್ಟಿ ಅರಂತಡೆ ಸ್ಥಳೀಯ ಪ್ರಮುಖ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನಗಾಣಿಸಿದರು.
ಮನವಿ ಸಲ್ಲಿಕೆ: ಇದೇ ಸಂದರ್ಭ ಎಮ್11ಘಟಕದಿಂದ ಸುತ್ತಲ ಗ್ರಾಮಗಳಲ್ಲಿ ಕಂಡುಬಂದಿರುವ ಗಂಭೀರ ಸಮಸ್ಯೆಗಳ ಬಗ್ಗೆ ಡಾ. ಶಾಂತ್ ಎ.ತಿಮ್ಮಯ್ಯನವರಿಗೆ ಮನವಿ ಸಲ್ಲಿಸಿ ಶೀಘ್ರ ಪರಿಹಾರಕ್ಕೆ ವಿನಂತಿಸಲಾಯಿತು.
ಎಮ್11 ಘಟಕದಲ್ಲಿ ಬಾಯ್ಲರ್ ಉರಿಸಲು ನಿತ್ಯ ಟನ್ನುಗಟ್ಟಲೆ ಕಟ್ಟಿಗೆಗಳನ್ನು ಉರಿಸಲಾಗುತ್ತಿದೆ. ಕಾನೂನು ಬಾಹಿರವಾಗಿ ಮರಗಳನ್ನು ಕಡಿದು ತರಲಾಗುತ್ತಿದ್ದು, ಪರಿಸರ ನಾಶವಾಗುತ್ತಿದೆ ಎಂದು ನಾಗೇಶ್ ಭಟ್ ಆರೋಪಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದರು.
ಪರಿಸರ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ವಿಜಯಾ ಹೆಗ್ಡೆ, ಉಡುಪಿ ಇಒ ಕೀರ್ತಿಕುಮಾರ್, ಮಂಗಳೂರು ಇಒ ಲಕ್ಷ್ಮೀಕಾಂತ್, ಶ್ರೀ ದೇವಳದ ಆಡಳಿತ ಮೊಕ್ತೇಸರ ವೇದಮೂರ್ತಿ ಮಧ್ವರಾಯ ಭಟ್, ಹೋರಾಟ ಸಮಿತಿಯ ಪ್ರಮುಖರಾದ ದಿನೇಶ್ ಕೋಟ್ಯಾನ್ ಪಲಿಮಾರು, ನವೀನ್ಚಂದ್ರ ಸುವರ್ಣ ಅಡ್ವೆ, ಪ್ರೇಮಾನಂದ ಕಲ್ಮಾಡಿ, ಸಂದೀಪ್ ಪಲಿಮಾರು, ಚಂದ್ರಹಾಸ ಇನ್ನ, ಶಂಕರ್ ಶೆಟ್ಟಿ ಅಡ್ವೆ ಸನ್ನೋಣಿ, ಸಂದೇಶ್ ಶೆಟ್ಟಿ ಪಡುಬಿದ್ರಿ, ರಶ್ಮಿ ಪಲಿಮಾರು, ಮಹೇಶ್ ಶೆಟ್ಟಿ, ರಮಾನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

