ಕಾರ್ಕಳ: ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಗೋವಾ ಮದ್ಯ ವಶ
(Karkala) ಕಾರ್ಕಳ : ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ವಶಕ್ಕೆ ಪಡೆದಿದ್ದಾರೆ.
ಕಾರ್ಕಳ ತಾಲೂಕಿನ ಬೋಳ ಗ್ರಾಮದ ಅವಿನಾಶ್ ಮಲ್ಲಿ ಎಂಬವರಿಗೆ ಸಂಬಂಧಿಸಿದ ಎರಡು ಮನೆಗಳ ಮೇಲೆ ದಾಳಿ ನಡೆಸಿದ ಉಡುಪಿ ಅಬಕಾರಿ ಇಲಾಖೆಯ ಅಧಿಕಾರಿಗಳು ಸುಮಾರು 260ಕ್ಕೂ ಅಧಿಕ ಬಾಕ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಅಬಕಾರಿ ಅಧಿಕಾರಿಗಳು ಅದನ್ನು ಜಪ್ತಿ ಮಾಡಿ ಕಾರ್ಕಳ ಅಬಕಾರಿ ಇಲಾಖೆಯಲ್ಲಿ ದಾಸ್ತಾನಿರಿಸಿದ್ದಾರೆ. ಇವೆಲ್ಲವೂ ಬ್ರ್ಯಾಂಡೆಡ್ ಮಾಲ್‌ಗಳಾದ ಜಾನಿ ವಾಕರ್, ಬ್ಲಾಕ್ ಲೇಬಲ್, ಬ್ಲ್ಯಾಕ್ ಆಂಡ್ ವೈಟ್, ಮ್ಯಾನ್ಶನ್ ಹೌಸ್ (MH), ಮ್ಯಾಕ್‌ಡ್ವೆಲ್ (MC), ಓಡ್ಕ ಲೇಬಲ್‌ನ ನಕಲಿ ಮದ್ಯವಾಗಿದೆ.
ವಶಕ್ಕೆ ಪಡೆದ ಮದ್ಯದ ಮೌಲ್ಯ ಲಕ್ಷಾಂತರ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಗೋವಾದಿಂದ ಕಡಿಮೆ ಬೆಲೆಗೆ ಮದ್ಯವನ್ನು ತರಿಸಿಕೊಂಡು ಮನೆಯಲ್ಲಿಯೇ ಸಂಗ್ರಹಿಸಿಟ್ಟುಕೊಂಡು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು ಎನ್ನುವ ಶಂಕೆ ವ್ಯಕ್ತವಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಮನೆಯನ್ನು ಶೋಧಿಸಿದಾಗ ಅಕ್ರಮ ಮದ್ಯದ ಬಾಟಲ್‌ಗಳು ಇರುವುದು ತಿಳಿದುಬಂದಿದೆ. ವಶಪಡಿಸಿಕೊಂಡ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಪರಾರಿಯಾಗಿದ್ದು, ಅಬಕಾರಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಮತ್ತು ನಕಲಿ ಮದ್ಯ ತಯಾರಿಕೆ, ರವಾನೆ ಹೇಗೆ ನಡೆಯುತ್ತಿದೆ ಎನ್ನುವುದರ ಕುರಿತು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ತಂಡ ತನಿಖೆ ನಡೆಸುತ್ತಿದೆ.

