ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿಗೆ ನ. 30 ಕಡೇ ದಿನಾಂಕ : ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ
ಕಾಪು : ಮಣಿಪಾಲ ಸಮೂಹದ ವಿವಿಧ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿರುವ ಮಣಿಪಾಲ ಆರೋಗ್ಯ ಕಾರ್ಡ್ 2024 ನೋಂದಾವಣೆಗೆ ನ. 30 ಕಡೇ ದಿನಾಂಕವಾಗಿದೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ ಹೇಳಿದ್ದಾರೆ.
ಅವರು ಕಾಪು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಕಳೆದ ವರ್ಷ 3.50 ಲಕ್ಷ ಕಾರ್ಡ್‌ಗಳ ನೋಂದಾವಣೆಯಾಗಿದೆ. ಶೇ. 70ಕ್ಕಿಂತ ಅಧಿಕ ಫಲಾನುಭವಿಗಳು ಕಾಡ್೯ಗಳನ್ನು ಬಳಸಿಕೊಂಡಿದ್ದಾರೆ. ಈ ಬಾರಿ ನಾಲ್ಕು ಲಕ್ಷ ಕಾರ್ಡ್‌ಗಳ ನೋಂದಾವಣೆಯ ಗುರಿ ಹೊಂದಲಾಗಿದೆ ಎಂದರು.
ಮಣಿಪಾಲ್ ಆರೋಗ್ಯ ಕಾರ್ಡ್ದಾರರು ತಜ್ಞ ಮತ್ತು ಸೂಪರ್ ಸ್ಪೆಷಲಿಸ್ಟ್ ವೈದ್ಯರೊಂದಿಗಿನ ಸಮಾಲೋಚನೆ ಶುಲ್ಕದಲ್ಲಿ ಶೇ. 50 ರಷ್ಟು ರಿಯಾಯಿತಿ, ರೋಗ ನಿರ್ಣಯ ಮತ್ತು ಪ್ರಯೋಗಾಲಯ ಪರೀಕ್ಷೆ ಸೇವೆಯಲ್ಲಿ ಶೇ. 25 ರಷ್ಟು ರಿಯಾಯಿತಿ, ರೇಡಿಯಾಲಜಿ, ಹೊರರೋಗಿ ಕಾರ್ಯ ವಿಧಾನಗಳು ಮತ್ತು ಮಧುಮೇಹ ಪಾದದ ಆರೈಕೆಯಲ್ಲಿ ಶೇ. 20ರಷ್ಟು ರಿಯಾಯಿತಿ, ಡಯಾಲಿಸಿಸ್ ನಲ್ಲಿ ರೂ. 100 ರಿಯಾಯಿತಿ, ಆಸ್ಪತ್ರೆಯ ಔಷಧಿಗಳ ಮೇಲೆ ಶೇ. 10ರವರೆಗೆ ರಿಯಾಯಿತಿ ಮತ್ತು ಜನರಲ್ ವಾರ್ಡ್‌ನಲ್ಲಿ ಒಳರೋಗಿಗಳ ಬಿಲ್‌ಗಳಲ್ಲಿ ಶೇ. 25ರಷ್ಟು ರಿಯಾಯಿತಿ ಸೌಲಭ್ಯವಿದೆ.
ಮಣಿಪಾಲ ಆರೋಗ್ಯ ಕಾರ್ಡ್ 2024 ಗಳನ್ನು ಒಂದು ವರ್ಷ ಮತ್ತು ಎರಡು ವರ್ಷದ ಯೋಜನೆಯಲ್ಲಿ ವಿತರಿಸಲಾಗುತ್ತದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿ.ಎಂ.ಎ. ಪೈಆಸ್ಪತ್ರೆ ಉಡುಪಿ, ಡಾ. ಟಿ.ಎಂ.ಎ. ಪೈರೋಟರಿ ಆಸ್ಪತ್ರೆ ಕಾರ್ಕಳ, ಕೆ.ಎಂಸಿ. ಆಸ್ಪತ್ರೆ ಮಂಗಳೂರು ಮತ್ತು ಅತ್ತಾವರ, ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು, ಮಣಿಪಾಲ ಆಸ್ಪತ್ರೆ – ಗೋವಾ ಮತ್ತು ಮಣಿಪಾಲ ಹಾಗೂ ಮಂಗಳೂರಿನಲ್ಲಿನ ದಂತ ಕಾಲೇಜುಗಳಲ್ಲಿ ಪ್ರಯೋಜನಗಳನ್ನು ಪಡೆಯಬಹುದು.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಸಹಾಯಕ ವ್ಯವಸ್ಥಾಪಕ ಚೇತನ್, ಪ್ರತಿನಿಧಿ ಸಂದೀಪ್ ಹಾಗೂ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್ಕೆ ಹೆಜ್ಮಾಡಿ ಉಪಸ್ಥಿತರಿದ್ದರು.

