ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನೊಂದಿಗೆ ವೈಜ್ಞಾನಿಕ ಮತ್ತು ಸಿ ಎಸ್ ಐ ಆರ್ ಪ್ಯಾರಾಡೈಂ ಸಂಸ್ಥೆ, ಬೆಂಗಳೂರು ಜತೆ ಒಡಂಬಡಿಕೆ
(Bantakal) ಬಂಟಕಲ್ : ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಸಿ ಎಸ್ ಐ ಆರ್ ಪ್ಯಾರಾಡೈಂ ಸಂಸ್ಥೆ, ಬೆಂಗಳೂರು ಇವರೊಂದಿಗೆ ಗುರುವಾರ ಒಡಂಬಡಿಕೆಗೆ ಸಹಿ ಹಾಕಲಾಯಿತು.
ದಕ್ಷಿಣ ಭಾರತ ಖಾಸಗಿ ತಾಂತ್ರಿಕ ಕಾಲೇಜಿನ ಜತೆ ಇದು ಮೊದಲ ಒಡಂಬಡಿಕೆ ಎಂಬುದು ಉಲ್ಲೇಖನೀಯ.
ಈ ಎರಡೂ ಸಂಸ್ಥೆಗಳು ರಾಷ್ಟ್ರೀಯ ಕಾರ್ಯಗಾರಗಳನ್ನು ಆಯೋಜಿಸುವುದು, ವಿಚಾರ ಸಂಕಿರಣ, ಸಂಶೋಧನ ಜ್ಞಾನದ ವಿನಿಮಯ, ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯದ ಅಭಿವೃದ್ದಿಗಾಗಿ ಸಿ ಎಸ್ ಐ ಆರ್ ಪ್ಯಾರಾಡೈಂ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ತರಬೇತಿ, ಎರಡೂ ಸಂಸ್ಥೆಗಳ ಅಧ್ಯಾಪಕರು ಜಂಟಿಯಾಗಿ ಬಿ.ಇ, ಎಂ.ಟೆಕ್ ಮತ್ತು ಪಿಎಚ್ಡಿ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ವರ್ಕ್ ಮತ್ತು ಸಂಶೋಧನಾ ಕಾರ್ಯಕ್ಕೆ ಮಾರ್ಗದರ್ಶನ ನೀಡುವುದು ಈ ಒಡಂಬಡಿಕೆಯ ಮುಖ್ಯ ಉದ್ದೇಶವಾಗಿದೆ.
ಇದರ ಜತೆಗೆ ಬಂಟಕಲ್ಲಿನ ತಾಂತ್ರಿಕ ವಿದ್ಯಾಲಯದ ಆವರಣದಲ್ಲಿ ಭೂಮಿಯ ಪದರಗಳ ಚಲನಶೀಲತೆಯ ಅಧ್ಯಯನ ನಡೆಸುವ ಉದ್ದೇಶದಿಂದ ಒಂದು ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇದರಿಂದ ದೊರೆಯುವ ಮಾಹಿತಿಗಳನ್ನು ಕ್ರೋಢೀಕರಿಸಿ ವಿಶೇಷ ಅಧ್ಯಯನ ನಡೆಸುವ ಯೋಜನೆಯನ್ನು ಹೊಂದಲಾಗಿದೆ.
ಈ ಸಹಯೋಗವು ಸಂಸ್ಥೆಯ ವಿದ್ಯಾರ್ಥಿ ಮತ್ತು ಅಧ್ಯಾಪಕರಿಗೆ ಸಂಶೋಧನೆ ಮತ್ತು ಶೈಕ್ಷಣಿಕ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ವಿದ್ಯಾರ್ಥಿ ಮತ್ತು ಅಧ್ಯಾಪಕರಿಗೆ ಸಿ ಎಸ್ ಐ ಆರ್ ಪ್ಯಾರಾಡೈಂ ಸಂಸ್ಥೆಯಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸಲು ಸಹಕಾರಿಯಾಗಿದೆ.
ಈ ಒಡಂಬಡಿಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಸಿ ಎಸ್ ಐ ಆರ್ ಪ್ಯಾರಾಡೈಂ ಸಂಸ್ಥೆಯ ಹಿರಿಯ ವಿಜ್ಞಾನಿಗಳಾದ ಡಾ. ಇಮ್ತಿಯಾಜ್ ಎ ಪರ್ವೇಜ್ ಮತ್ತು ಚಿರಂಜೀವಿ ವಿವೇಕ್ ಜಿ ಭಾಗವಹಿಸಿದ್ದರು.
ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್, ಶ್ರೀ ಸೋದೆ ಮಠದ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ. ರಾಧಾಕೃಷ್ಣ ಎಸ್ ಐತಾಳ್, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಸಂಸ್ಥೆಯ ಡೀನ್ಗಳಾದ ಡಾ. ಸುದರ್ಶನ್ ರಾವ್ ಕೆ, ಡಾ. ನಾಗರಾಜ್ ಭಟ್, ಎಂಬಿಎ ವಿಭಾಗದ ನಿರ್ದೇಶಕರಾದ ಡಾ. ಸೂರಜ್ ಫ್ರಾನ್ಸಿಸ್ ನೋರೊನ್ಹಾ, ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.
ಈ ಒಡಂಬಡಿಕೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು ವಿದ್ಯಾರ್ಥಿಗಳನ್ನು ಮತ್ತು ಅಧ್ಯಾಪಕರನ್ನು ಉತ್ತೇಜಿಸುವುದು ಹಾಗೂ ಒಡಂಬಡಿಕೆಯ ಮೂಲಕ ದೊರೆಯುವ ಎಲ್ಲಾ ಲಾಭಗಳನ್ನು ವಿದ್ಯಾಸಂಸ್ಥೆಯು ಪಡೆಯುವ ನಿಟ್ಟಿನಲ್ಲಿ ಒಡಂಬಡಿಕೆಯ ಸಂಪರ್ಕಾಧಿಕಾರಿಯಾಗಿ ಡಾ. ಸುರಜಿತ್ ಡೆಬರ್ಮಾರವರನ್ನು ನಿಯೋಜಿಸಲಾಗಿದೆ.

