ಕಟಪಾಡಿ ; 6ಕೋಟಿ ರೂ. ವೆಚ್ಚದಲ್ಲಿ ದ್ರಾವಿಡ ಶೈಲಿಯ ಮಕರಾನ್ನ ಅಮೃತ ಶಿಲಾಮಯ ಅಯ್ಯಪ್ಪ ಮಂದಿರ ನಿರ್ಮಾಣಕ್ಕೆ ಸಿದ್ಧತೆ
ಕಟಪಾಡಿ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ನೇತೃತ್ವದಲ್ಲಿ
ಕಟಪಾಡಿ: ಕಟಪಾಡಿಯ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದವು 40ನೇ ವರ್ಷದ ಶಬರಿಮಲೆ ಯಾತ್ರೆಯನ್ನು ಪೂರೈಸಲಿರುವ ಸಮಯದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಸಂಕಲ್ಪಿಸಿರುವ ನೂತನ ಅಯ್ಯಪ್ಪ ಸ್ವಾಮಿಯ ಮಂದಿರ ನಿರ್ಮಾಣಕ್ಕೆ ಮುಂದಾಗಿದೆ.
ಕಟಪಾಡಿಯ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ (ರಿ.) ಇದರ ನೇತೃತ್ವದಲ್ಲಿ ಶ್ರೀ ಸುರೇಶ್ ಗುರುಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕಟಪಾಡಿಯ ಏಣಗುಡ್ಡೆ ಕುರ್ಕಾಲು ರಸ್ತೆಯ ರಿಶಾಲ್ ನಗರದ ಒಂಭತ್ತನೇ ಕ್ರಾಸ್ನಲ್ಲಿ ನೂತನ ಅಮೃತ ಶಿಲಾಮಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ನಿರ್ಮಾಣಕ್ಕೆ ಭರದ ಸಿದ್ಧತೆ ನಡೆದಿದೆ.
ಕುರ್ಕಾಲು-ಮಣಿಪುರದಲ್ಲಿ ಹರಿಯುತ್ತಿರುವ ಪಾಪನಾಶಿನಿ ನದಿಪಾತ್ರದ ವಿಶಾಲವಾದ ಹಸಿರುಸಿರಿಯ ಮಡಿಲಿನಲ್ಲಿ ಉದ್ಯಮಿ ಶ್ರೀ ರಿಶಾನ್ ಟಿ. ಅವರು ದಾನವಾಗಿ ನೀಡಿರುವ 30 ಸೆಂಟ್ಸ್ ನಿವೇಶನದಲ್ಲಿ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಭಕ್ತಾಧಿಗಳ ಸಹಕಾರದೊಂದಿಗೆ ಭವ್ಯವಾದ ದೇವಸ್ಥಾನ ನಿರ್ಮಾಣಗೊಳ್ಳಲಿದೆ.
ದಕ್ಷಿಣ ಕರಾವಳಿಯಲ್ಲೇ ಪ್ರಪ್ರಥಮವಾಗಿ ಮಕರಾನ್ನ ಅಮೃತಶಿಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬಲು ಅಪರೂಪದ ಏಕೈಕ ಅಯ್ಯಪ್ಪ ಸ್ವಾಮಿ ಮಂದಿರ ಇದಾಗಿದೆ. ಉಡುಪಿ ಜಿಲ್ಲೆಯ ಏಣಗುಡ್ಡೆ ಕುರ್ಕಾಲು ರಿಶಾಲ್ ನಗರದಲ್ಲಿ ದ್ರಾವಿಡ ಶೈಲಿಯ ಪ್ರಥಮ ಅಯ್ಯಪ್ಪ ಸ್ವಾಮಿ ಮಂದಿರ ಮುಂಬರುವ ಮಕರ ಸಂಕ್ರಾಂತಿ ಹಬ್ಬಕ್ಕೆ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ.
ಈ ಸುಂದರ ಮಂದಿರದ ಆವರಣದೊಳಗೆ ಗಣಪತಿ, ಸುಬ್ರಹ್ಮಣ್ಯ ಸಹಿತ ಅಯ್ಯಪ್ಪ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ. ಮಂದಿರ ನಿವೇಶನದ ಪಕ್ಕದಲ್ಲೇ ಇರುವ ಸ್ಥಳ ಸಂಬಂಧಿತ ಪುರಾತನ ನಾಗದೇವರ ಸನ್ನಿಧಾನವೂ ಕೂಡಾ ಜೀರ್ಣೋದ್ಧಾರಗೊಳ್ಳಲಿದೆ.
ಶ್ರೀ ಅರುಣ್ ಯೋಗಿರಾಜ್ ಅವರಿಂದ ಮೂರ್ತಿ ಕೆತ್ತನೆ:
ಅಯೋಧ್ಯೆ ಶ್ರೀ ರಾಮಮಂದಿರದಲ್ಲಿ ರಾಮಲಲ್ಲಾನ ಭವ್ಯಮೂರ್ತಿಯನ್ನು ಕೆತ್ತನೆ ಮಾಡಿ ಖ್ಯಾತಿ ಪಡೆದ ಅರುಣ್ ಯೋಗಿರಾಜ್ ಅವರೇ ಸ್ವತಃ ಈ ಅಯ್ಯಪ್ಪ ದೇವಾಲಯದ ಅಯ್ಯಪ್ಪ ಸ್ವಾಮಿ ಮೂರ್ತಿಯನ್ನು ಕೆತ್ತನೆ ಮಾಡಲಿದ್ದಾರೆ.
ಕೃಷ್ಣ ಶಿಲೆಯಲ್ಲಿ ಅಯ್ಯಪ್ಪ ಮೂರ್ತಿಯನ್ನು ಕೆತ್ತನೆ ಮಾಡಲು ಅರುಣ್ ಯೋಗಿರಾಜ್ ಅವರು ವೀಳ್ಯ ಪಡೆದುಕೊಂಡು ಕೆಲಸ ಆರಂಭಿಸಿದ್ದಾರೆ. ‘ತಾನು ಚಿಕ್ಕಂದಿನಲ್ಲಿ ಪ್ರ ಪ್ರಥಮವಾಗಿ ಅಯ್ಯಪ್ಪ ಸ್ವಾಮಿ ಮೂರ್ತಿಯನ್ನು ರಚನೆ ಮಾಡಿದ್ದೆ. ಆ ಮೂರ್ತಿ ಈಗ ಎಲ್ಲಿ ಪೂಜೆಗೊಳ್ಳುತ್ತಿದೆ ಎಂದು ಗೊತ್ತಿಲ್ಲ. ನನ್ನ ಮೊದಲ ಮೂರ್ತಿಗಾಗಿ ಸಾಕಷ್ಟು ಹುಡುಕಾಟ ನಡೆಸಿದರೂ, ಅದು ಸಿಕ್ಕಿಲ್ಲ. ಇದೀಗ ಮತ್ತೆ ಕಟಪಾಡಿಯ ಸಾರ್ವಜನಿಕ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಮಂದಿರಕ್ಕೆ ಅಯ್ಯಪ್ಪನ ಮೂರ್ತಿ ಕೆತ್ತಲು ಸದವಕಾಶ ಸಿಕ್ಕಿರುವುದು ನನ್ನ ಪುಣ್ಯ. ಉಡುಪಿ ಶ್ರೀಕೃಷ್ಣ ದೇವರ ನಾಡಿನಲ್ಲಿ ನಾನು ಕೆತ್ತುವ ಅಯ್ಯಪ್ಪ ಮೂರ್ತಿ ಪೂಜೆಗೊಳ್ಳಲಿದೆ ಎನ್ನುವುದು ಕೂಡಾ ನನ್ನ ಸೌಭಾಗ್ಯ’ಎಂದು ಶ್ರೀ ಅರುಣ್ ಯೋಗಿರಾಜ್ ಸಂತಸ ಪಟ್ಟಿದ್ದಾರೆ.
ದ್ರಾವಿಡ ಶೈಲಿಯ ಅಯ್ಯಪ್ಪ ಮಂದಿರ:
ದಕ್ಷಿಣ ಭಾರತದ ದ್ರಾವಿಡ ಶೈಲಿಯ ವಾಸ್ತು ಶಿಲ್ಪವನ್ನು ಒಳಗೊಂಡಿರುವ ಈ ದೇವಸ್ಥಾನಕ್ಕೆ ಉತ್ತರ ಭಾರತದ ನುರಿತ ಶಿಲ್ಪಿಗಳ ಕಲಾ ಪ್ರೌಢಿಮೆ ವಿಶೇಷ ಮೆರುಗು ನೀಡಲಿದೆ. ಶಿಲ್ಪಕಲಾ ಕ್ಷೇತ್ರದಲ್ಲಿ ಮೂರು ತಲೆಮಾರುಗಳಷ್ಟು ಇತಿಹಾಸ ಹೊಂದಿರುವ ರಾಜಸ್ಥಾನ ಸೋಮಪುರದ ಶಿಲ್ಪಿ ವಸಂತ ಕುಮಾರ್ ಶಾಂತಿಲಾಲ್ ಮತ್ತವರ ತಂಡವು ನೂತನ ಅಯ್ಯಪ್ಪ ಮಂದಿರಕ್ಕಾಗಿ ಮಕರಾನ್ನ ಅಮೃತ ಶಿಲೆಯ ಕೆತ್ತನೆ ಕೆಲಸಗಳನ್ನು ಕೈಗೊಂಡಿರುವುದು ವಿಶೇಷ.
10ವರ್ಷ ಕೆಳಗಿನ ಬಾಲಕಿಯರು, 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಯಾತ್ರೆ:
ಕಳೆದ 40 ವರ್ಷಗಳಿಂದ ಕಟಪಾಡಿಯ ಸಾರ್ವಜನಿಕ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಅಯ್ಯಪ್ಪ ಗುರುಸ್ವಾಮಿಯವರಾದ ಸುರೇಶ್ ಗುರುಸ್ವಾಮಿ ಅವರ ಮಾರ್ಗದರ್ಶನದಲ್ಲಿ ಪ್ರತೀ ವರ್ಷ ಮಕರ ಸಂಕ್ರಾಂತಿಗೆ 100 ಕ್ಕೂ ಅಧಿಕ ಸ್ವಾಮಿಗಳು ಅಯ್ಯಪ್ಪ ಮಾಲಾಧಾರಿಗಳಾಗಿ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಕಟಪಾಡಿ ಎಣಗುಡ್ಡೆ ಕುರ್ಕಾಲಿನಲ್ಲಿ ನೂತನ ಅಯ್ಯಪ್ಪ ಸ್ವಾಮಿ ದೇವಸ್ಥಾನ ಲೋಕಾರ್ಪಣೆಗೊಂಡ ಬಳಿಕ ಪ್ರತೀ ವರ್ಷ ಮಕರಸಂಕ್ರಾಂತಿಗೆ 10ವರ್ಷದಿಂದ ಕೆಳಗಿನ ಬಾಲಕಿಯರನ್ನು ಹಾಗೂ 60 ವರ್ಷ ಮೇಲ್ಪಟ್ಟ ಮಹಿಳೆಯರನ್ನು ಉಚಿತವಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿಸುವ ಸಂಕಲ್ಪವನ್ನೂ ಕೂಡಾ ಅಯ್ಯಪ್ಪ ಭಕ್ತವೃಂದ ಹೊಂದಿದೆ.

