ಬೆಳ್ತಂಗಡಿ : ನಿದ್ದೆ ಮಾತ್ರೆ ಸೇವಿಸಿ ಮರಣ ಹೊಂದಿದ ತಾಯಿಯ ಅಂತ್ಯ ಸಂಸ್ಕಾರ
ಪುತ್ರ ಜಯರಾಂ ಕೆ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ̈
(Belthangadi) ಬೆಳ್ತಂಗಡಿ: ನಿದ್ದೆ ಮಾತ್ರೆ ಸೇವಿಸಿ ತೀವ್ರ ಅಸ್ವಸ್ಥರಾಗಿ ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದ ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ದಿ. ಕುಂಞಿರಾಮನ್ ನಾಯರ್ ಅವರ ಪತ್ನಿ ಕಲ್ಯಾಣಿ(96) ಅವರ ಅಂತ್ಯ ಸಂಸ್ಕಾರ ಮಂಗಳವಾರ ಮುಂಡಾಜೆಯ ರುದ್ರ ಭೂಮಿಯಲ್ಲಿ ನಡೆಯಿತು.
ಗಂಭೀರಾವಸ್ಥೆಯಲ್ಲಿರುವ ಅವರ ಪುತ್ರ ಚಿತ್ರಕಲಾ ಶಿಕ್ಷಕ, ರಾಜ್ಯ ಮಟ್ಟದ ಕಲಾವಿದ ಜಯರಾಂ ಕೆ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ. ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿಷಮ ಸ್ಥಿತಿ ಇದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ತರಿಗೆ ಹಸ್ತಾಂತರಿಸಲಾಯಿತು.
ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ತಾಯಿ ಮಗ ಇಬ್ಬರೂ ಕಳೆದ ಮೇ. 9 ರಂದು ರಾತ್ರಿ ಕೂಳೂರು ಮನೆಯಲ್ಲಿ ಅತಿಯಾಗಿ ನಿದ್ದೆ ಮಾತ್ರೆ ಸೇವಿಸಿದ್ದರು.
ಮೇ. 10 ರಂದು ಬೆಳಗ್ಗೆ ಜಯರಾಂ ಅವರ ಮನೆಯ ಬಳಿಯಿಂದ ಯಾವುದೇ ಶಬ್ದ ಕೇಳದೆ ಇದ್ದುದರಿಂದ ನೆರೆ ಹೊರೆ ಯವರು ಬಂದು ನೋಡಿದಾಗ ತಾಯಿ ಮತ್ತು ಮಗ ಮನೆಯೊಳಗೆ ದೇವರ ಕೋಣೆಯ ಎದುರು ಜೊತೆಯಾಗಿ ಮಲಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಊರವರು ಹಾಗೂ ಅಣ್ಣನ ಮಕ್ಕಳ ಸಹಕಾರದೊಂದಿಗೆ ಮನೆಯ ಬಾಗಿಲು ತೆಗೆದು ಒಳ ಪ್ರವೇಶಿಸಿದಾಗ ಇಬ್ಬರೂ ಉಸಿರಾಡುತ್ತಿದ್ದರು. ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತ ಕಲ್ಯಾಣಿ ಅವರಿಗೆ ನಾಲ್ವರು ಗಂಡು ಮಕ್ಕಳಿದ್ದು, ಈ ಪೈಕಿ ಶ್ರೀಧರ ನಾಯರ್ ಮತ್ತು ರಾಜನ್ ನಾಯರ್ ಅವರು ಈಗಾಗಲೇ ಮೃತಪಟ್ಟಿದ್ದಾರೆ.
ಮೃತರು ಹಿರಿಯ ಪುತ್ರ ಶಶಿಧರ ನಾಯರ್ ಹಾಗೂ ಕಿರಿಯ ಪುತ್ರ ಜಯರಾಂ ಕೆ ಅವರನ್ನು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

