ಬೆಂಗಳೂರು ಆರ್ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ; ಓರ್ವ ಮಹಿಳೆ ಸೇರಿದಂತೆ ಏಳು ಸಾವು
(Bengaluru) ಬೆಂಗಳೂರು: ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಗೆಲುವಿನ ಹಿನ್ನಲೆಯಲ್ಲಿ ಬೆಂಗಳೂರಿನ ನಡೆಯುತ್ತಿರುವ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಬ್ಬ ಮಹಿಳೆ ಸೇರಿದಂತೆ ಏಳು ಜನರು ಸಾವಿಗೀಡಾದ ಘಟನೆ ಬುಧವಾರ ಘಟಿಸಿದೆ.
ಸುಮಾರು 15ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇಬ್ಬರು ವ್ಯಕ್ತಿಗಳು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, ನಾಲ್ವರು ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಗಳು ಸೂಚಿಸಿವೆ. ಅಲ್ಲದೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸಿವೆ.
ಆರ್ಸಿಬಿ ತಂಡದ ಸದಸ್ಯರನ್ನು ವೀಕ್ಷಿಸಲು ಬುಧವಾರ ಮಧ್ಯಾಹ್ನ ತಂಡದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಬೆಂಗಳೂರು ನಗರ ಕೆಂಪು ಬಣ್ಣದಿಂದ ಆವೃತವಾಗಿತ್ತು. ಹಲವಾರು ಕಡೆಗಳಲ್ಲಿ ಇಂದು ಮಧ್ಯಾಹ್ನದಿಂದಲೆ ನಗರದಾದ್ಯಂತ ಆರ್ಸಿಬಿ, ವಿರಾಟ್ ಕೊಹ್ಲಿ ಮತ್ತು ತಂಡದ ನಾಯಕ ರಜತ್ ಪಾಟಿದಾರ್ ಅವರ ಹೆಸರಿನಲ್ಲಿ ಜೋರಾಗಿ ಜಯಘೋಷಗಳು ಕೇಳಿಬಂದಿದೆ.
ಆರ್ಸಿಬಿ ತಂಡವು ಬುಧವಾರ ಮಧ್ಯಾಹ್ನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಲು ತಮ್ಮ ತಂಡದ ಬಸ್ನಲ್ಲಿ ವಿಧಾನಸೌಧಕ್ಕೆ ತೆರಳಿತು. ವಿಧಾನಸೌಧದ ಭವ್ಯ ಮೆಟ್ಟಿಲುಗಳಲ್ಲಿ ವೇದಿಕೆ ಕಾರ್ಯಕ್ರಮ ಮತ್ತು ಸನ್ಮಾನವನ್ನು ಏರ್ಪಡಿಸಲಾಗಿತ್ತು, ಅಲ್ಲಿ ಕೂಡಾ ದೊಡ್ಡ ಜನಸಮೂಹ ಸೇರಿತ್ತು ಎಂದು ತಿಳಿದು ಬಂದಿದೆ.

