ಉಡುಪಿ: ಪ್ರಸಾದ್ ರಾಜ್ ಕಾಂಚನ್ ಹುಟ್ಟು ಹಬ್ಬ ಪ್ರಯುಕ್ತ ನೇತ್ರದಾನ ಮತ್ತು ನೇತ್ರದಾನ ಮಾಹಿತಿ ಶಿಬಿರ
(Udupi) ಉಡುಪಿ: ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಕಾಂಚನ್ ಹುಟ್ಟು ಹಬ್ಬ ಪ್ರಯುಕ್ತ ಭಾನುವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿ ಸೇರಿದಂತೆ ಮೂರು ಕಡೆಗಳಲ್ಲಿ ಬೃಹತ್ ನೇತ್ರದಾನ ಶಿಬಿರ ಹಾಗೂ ನೇತ್ರದಾನ ಮಾಹಿತಿ ಶಿಬಿರವನ್ನು ಅಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಕಚೇರಿಯಲ್ಲಿ ನೇತ್ರದಾನ ಮಾಡಲು ಸೇರಿರುವ ಯುವಕರ ದಂಡು ಕಂಡು ಹರ್ಷ ಎನಿಸಿದೆ. ಇಂದು ನಮ್ಮನ್ನೆಲ್ಲ ಸ್ಫೂರ್ತಿ ಗೊಳಿಸುವ ಕಾರ್ಯಕ್ರಮ ನಡೆದಿದೆ. ಇವತ್ತು ಯುವಕರನ್ನೆಲ್ಲಾ ಒಟ್ಟು ಸೇರಿಸಿ ಸಮಾಜಮುಖಿ ಕೆಲಸ ಮಾಡಲು ಮುಂದಾಗಿರುವುದು ಶ್ಲಾಘನೀಯ. ನಮ್ಮ ನಂತರ ನಮ್ಮ ಕಣ್ಣನ್ನು ದಾನ ಮಾಡುವುದರ ಮೂಲಕ ದೃಷ್ಟಿ ಇಲ್ಲದವರಿಗೆ ಬೆಳಕಾಗುವಂತಹ ಈ ಅಮೂಲ್ಯ ಕಾರ್ಯಕ್ರಮದ ಹಮ್ಮಿಕೊಂಡ ಯುವ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಮನುಷ್ಯ ಸಾಧನೆಗಳ ಶಿಖರ ಏರಬೇಕಾದರೆ ಕಣ್ಣುಗಳು ಬಹು ಮುಖ್ಯ ಪಾತ್ರ ವಹಿಸುತ್ತದೆ. ಇವತ್ತು ಕಣ್ಣುಗಳ ದಾನಕ್ಕೆ ಯುವ ಸಮೂಹ ಮುಂದೆ ಬಂದಿರುವುದು ಸಂತಸ ತಂದಿದೆ. ಹೊಸ ಮುಖಗಳಿಗೆ ಕಣ್ಣನ ಬಗ್ಗೆ ಕಾಳಜಿ ಬಂತೋ ಆಗ ಸಾಮಾಜದ ಬಗ್ಗೆ ಚಿಂತನೆ ಬಂತು ಎನ್ನಬಹುದು. ಇಂತಹಾ ಕಾರ್ಯಕ್ರಮದಿಂದ ಕಾಂಗ್ರೆಸ್ ಪಕ್ಷದ ಭವಿಷ್ಯ ಹತ್ತು ವರ್ಷ ಮುಂದೆ ಹೋದಂತೆ ಎಂದರು.
ಹುಟ್ಟು ಹಬ್ಬ ಅಚರಿಸಿಕೊಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಈ ಬಾರಿ ಯುವ ಕಾಂಗ್ರೆಸ್ ಕಾರ್ಯಕರ್ತರು ನೇತ್ರದಾನದ ಹೆಸರಲ್ಲಿ ಯುವಕರನ್ನು ಸಂಘಟಿಸುವ ಮಹತ್ತರ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾವು ರಾಜಕೀಯದಲ್ಲಿ ಸಮಾಜ ಸೇವೆಯ ಮೂಲಕ ಬೆಳೆಯಬೇಕಾಗಿದೆ ಈಗ ಮೂವತ್ತು ಲಕ್ಷ ಜನರಿಗೆ ಕಣ್ಣಿನ ಸಮಸ್ಯೆ ಇದ್ದು, ಕಾಂಗ್ರೆಸ್ ಪಕ್ಷದ ಯುವಕರು ತಮ್ಮ ನೇತ್ರದಾನದ ಮೂಲಕ ದೃಷ್ಟಿ ಇಲ್ಲದವರಿಗೆ ದೃಷ್ಟಿ ನೀಡಲು ಸಹಕಾರಿಯಾಗಲಿದ್ದಾರೆ. ಇವತ್ತು ಹೊಸದಾದ ಯುವಕರ ತಂಡ ಕಾಂಗ್ರೆಸ್ ಪಕ್ಷದಲ್ಲಿದೆ. ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ವಿಜಯ ಪತಾಕೆ ರಾರಾಜಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸರಳ ಕಾಂಚನ್, ದಿನಕರ್ ಹೇರೂರು, ಫಾದರ್ ವಿಲಿಯಂ ಮಾರ್ಟಿಸ್, ಗೀತಾ ವಾಗ್ಲೆ ಜ್ಯೋತಿ ಹೆಬ್ಬಾರ್, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಎಮ್ ಎ ಗಫೂರ್, ರೆ. ಫಾದರ್ ಸಂತೋಷ್, ಹರಿಪ್ರಸಾದ್ ರೈ, ಬ್ರಹ್ಮಾವರ ಭುಜಂಗ ಶೆಟ್ಟಿ, ಪ್ರಸಾದ್ ನೇತ್ರಾಲಯದ ವೈದ್ಯರು, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

