ಕಾರ್ಕಳ ಬೈಲೂರಿನ ಪರಶುರಾಮ ಥೀಮ್ ಪಾರ್ಕ್ : ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹ
(Karkala) ಕಾರ್ಕಳ : ಕಾ ರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ಪರಿಕಲ್ಪನೆಯಲ್ಲಿ ಪ್ರವಾದೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ನಿರ್ಮಾಣಗೊಂಡ ಪರಶುರಾಮ ಥೀಮ್ ಪಾರ್ಕ್ ಕಾರ್ಕಳದ ಕನಸಿನ ಯೋಜನೆಯಾಗಿದ್ದು, ಈ ಬಗ್ಗೆ ಜಾಲತಾಣದಲ್ಲಿ ಅಪಪ್ರಚಾರ ಮಾಡಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ವಹಿಸುವಂತೆ ಬಿಜೆಪಿ ಕಾರ್ಕಳ ಕ್ಷೇತ್ರಧ್ಯಕ್ಷ ನವೀನ್ ನಾಯಕ್ ಬುಧವಾರ ಪೊಲೀಸ್ ಇಲಾಖೆ ಮತ್ತು ತಾಲೂಕ ದಂಡಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಡಳಿತದ ಆದೇಶವನ್ನು ಗಣನೆಗೆ ತೆಗೆದುಕೊಳ್ಳದೆ ಕಾಂಗ್ರೆಸ್ ನಾಯಕರು ಮತ್ತು ಅವರ ಬೆಂಬಲಿಗರ ತಂಡ ಪ್ರತಿಮೆಯ ಕುರಿತು ಸಮಾರಂಭಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ ಕಾರ್ಕಳದ ಘನತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಅದಲ್ಲದೆ ಬೇರೆ ಬೇರೆ ಸಂದರ್ಭದಲ್ಲಿ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಡಳಿತ ಪ್ರತಿಮೆಯ ಕುರಿತು ಯಾವುದೇ ವ್ಯತ್ಯಾಸ ಆಗಿಲ್ಲ ಎಂದು ಸ್ಪಷ್ಟೀಕರಣ ನೀಡಿದರೂ ವ್ಯವಸ್ಥಿತ ರೀತಿಯಲ್ಲಿ ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ನೀಡುತ್ತ ಬಂದಿರುತ್ತಾರೆ.
ಪರಶುರಾಮ ಮೂರ್ತಿ ಫೈಬರ್ ನಿಂದ ಮಾಡಲಾಗಿದೆ ಹಾಗೂ ಕಳ್ಳತನ ಆಗಿದೆ ಎಂದು ಅಪಪ್ರಚಾರ ನಡೆಸಿದವರ ವಿರುದ್ಧ ಕಾನೂನು ಕ್ರಮ ಆದಷ್ಟು ಬೇಗ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪೋಲಿಸ್ ಇಲಾಖೆ ಎ ಎಸ್ ಪಿ ಮತ್ತು ತಾಲೂಕು ದಂಡಾಧಿಕಾರಿ ಪ್ರದೀಪ್ ಆರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಬಿಜೆಪಿ ಪ್ರಮುಖರಾದ ಮಹಾವೀರ ಹೆಗ್ಡೆ, ಸತೀಶ್ ಪೂಜಾರಿ ಬೋಳ, ರಾಮಚಂದ್ರ ನಾಯಕ್ ಹಾಗೂ ಬಿಜೆಪಿಗರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

