ಧರ್ಮಸ್ಥಳ ಕ್ಷೇತ್ರದ ತೇಜೋವಧೆಗೆ ಹಿಂದೂ ವಿರೋಧಿ ಶಕ್ತಿ ಯತ್ನ: ತನಿಖೆಗೆ ಉಡುಪಿ ಶಾಸಕರ ಆಗ್ರಹ
(Udupi) ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಹಿಂದೂ ವಿರೋಧಿ ಶಕ್ತಿಗಳ ಬಗ್ಗೆ ತನಿಖೆ ನಡೆಸುವಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ತಂಡದ ತನಿಖೆ ಪ್ರಗತಿಯಲ್ಲಿದ್ದರೂ, ಧರ್ಮಸ್ಥಳದ ಕುರಿತು ಆಧಾರ ರಹಿತ ಹೇಳಿಕೆಗಳಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವ ಕಮ್ಯೂನಿಸ್ಟ್ ಮನಸ್ಥಿತಿಯ ಜಾಲಗಳ ಬಗ್ಗೆ ತನಿಖೆ ನಡೆಸುವಂತೆ ಯಶ್ಪಾಲ್ ಸುವರ್ಣ ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತದಲ್ಲಿ ಪ್ರಭಾವಿ ಹುದ್ದೆಯಲ್ಲಿದ್ದ ತಮಿಳುನಾಡಿನ ಸಂಸದರೊಬ್ಬರು ಈ ಹಿಂದೂ ವಿರೋಧಿ ಶಕ್ತಿಗಳ ಹಿಂದೆ ಸೂತ್ರಧಾರಿಯಾಗಿ ಕೈಜೋಡಿಸಿರುವ ಬಗ್ಗೆ ರಾಜ್ಯ ಮಟ್ಟದ ದಿನಪತ್ರಿಕೆಗಳಲ್ಲಿ ವರದಿಯಾಗಿದೆ.
ಈ ಬೆಳವಣಿಗೆಗಳ ಹಿಂದೆ ಧರ್ಮಸ್ಥಳ ಕ್ಷೇತ್ರವನ್ನು ತೇಜೋವಧೆ ಮಾಡಲು ವ್ಯವಸ್ಥಿತ ಜಾಲವೇ ಕಾರ್ಯ ನಿರ್ವಹಿಸುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯಗಳು ಲಭ್ಯವಾಗಿದ್ದು, ಶೀಘ್ರವಾಗಿ ಸರಕಾರ ಕ್ರಮ ಕೈಗೊಳ್ಳ ಬೇಕೆಂದು ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

