ಉಡುಪಿ : ಅಷ್ಟಮಿಗೆ ಲಕ್ಷಾಂತರ ಉಂಡೆ ಚಕ್ಕುಲಿ ರೆಡಿ– ಮಠ ರಥಬೀದಿಯಲ್ಲಿ ಹಬ್ಬದ ಕಳೆ
15ರಂದು ಕೃಷ್ಣ ಲೀಲೋತ್ಸವಕ್ಕೆ (ವಿಟ್ಲಪಿಂಡಿ) ಭರದ ಸಿದ್ಧತೆ
(Udupi) ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಲಕ್ಷಾಂತರ ಸಂಖ್ಯೆಯಲ್ಲಿ ಉಂಡೆ ಚಕ್ಕುಲಿಗಳು ಈಗಾಗಲೇ ಸಿದ್ದಗೊಳ್ಳುತ್ತಿದ್ದು, ಹಲವಾರು ಮಂದಿ ಪಾಕ ತಜ್ಞರು ಇದರ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಶ್ರೀ ಕೃಷ್ಣ ಹಾಗೂ ಮಕ್ಕಳು ಇಷ್ಟಪಡುವ ಪ್ರಸಾದ ಇದಾಗಿದ್ದು, ಅಷ್ಟಮಿಯ ಮರುದಿನ ನಡೆಯುವ ಅನ್ನಸಂತರ್ಪಣೆ ಸಂದರ್ಭದಲ್ಲಿ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.
ಸೆ.14 ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು 15ರಂದು ಕೃಷ್ಣ ಲೀಲೋತ್ಸವಕ್ಕೆ (ವಿಟ್ಲಪಿಂಡಿ) ಭರದ ಸಿದ್ಧತೆ ನಡೆಯುತ್ತಿದ್ದು, ಮೊಸರು ಕುಡಿಕೆ ಉತ್ಸವಕ್ಕೆ ರಥಬೀದಿಯ ಸುತ್ತಲೂ 13 ಮರದ ತ್ರಿಕೋನಾಕೃತಿಯ ಗುರ್ಜಿಗಳ ನಿರ್ಮಾಣ ಪ್ರಕ್ರಿಯೆ ಈಗಾಗಲೇ ಸಂಪೂರ್ಣಗೊಂಡಿದೆ. ಮಠದಲ್ಲಿ ಗೋವುಗಳನ್ನು ನೋಡಿಕೊಳ್ಳುವ ಗೋವಳರು ರಥಬೀದಿ ಸುತ್ತಲೂ ಇದನ್ನು ಅಳವಡಿಕೆ ಮಾಡಿದ್ದಾರೆ.
ವ್ಯಾಸರಾಜ ಮಠ, ಕೃಷ್ಣ ಮಠ ಮತ್ತು ಕನಕ ಗೋಪುರದ ಮುಂಭಾಗ ಎರಡು ದಿಕ್ಕಿನಲ್ಲಿ ಬೃಹತ್ ಮಂಟಪದ ಗುರ್ಜಿ ನಿರ್ಮಿಸಲಾಗಿದೆ. ಅಷ್ಟಮಠಕ್ಕೆ ಸಂಬಂಧಿಸಿದ 8. ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ 2 ಗುರ್ಜಿಗಳು, 3 ಮಂಟಪ ಗುರ್ಜಿಗಳು ಸೇರಿ ಒಟ್ಟು 13 ಗುರ್ಜಿಗಳನ್ನು ರಚಿಸಲಾಗಿದೆ. ಪ್ರತಿ ಗುರ್ಜಿಗಳಲ್ಲಿ ತಲಾ ಮೂರು ಕುಡಿಕೆ ಇರಿಸಲಾಗಿದ್ದು, ಕುಡಿಕೆಗಳಲ್ಲಿ ಮೊಸರು, ಅರಳಿನ ಹುಡಿ, ಅರಿಶಿಣ – ಕುಂಕುಮದ ನೀರು ತುಂಬಿಸಲಾಗುತ್ತದೆ. ಒಟ್ಟು 47 ಮಣ್ಣಿನ ಕುಡಿಕೆಗಳಿಗೆ ಕಲಾತ್ಮಕವಾಗಿ ಬಣ್ಣ ಬಳಿಯಲಾಗಿದೆ.
ಸಂಜೆ 5ಕ್ಕೆ ರಾಜಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಶ್ರೀಕೃಷ್ಣ ಜಯಂತಿ ನಡೆಯಲಿದೆ.

