ಹತ್ತು ಹಲವು ಸಮಸ್ಯೆಗಳ ವಿರುದ್ದ ತೆಂಕ ಎರ್ಮಾಳು ಗ್ರಾಮಸ್ಥರಿಂದ ಪಂಚಾಯತ್ ಎದುರು ಪ್ರತಿಭಟನೆ
ಕಾಪು ತಾ. ಪಂ. ಈ ಓ ಜೇಮ್ಸ್ ಡಿ ಸಿಲ್ವಾರವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು.
(Thenka Yermal) ತೆಂಕ ಎರ್ಮಾಳು : ಹತ್ತು ಹಲವು ಸಮಸ್ಯೆಗಳ ವಿರುದ್ದ ತೆಂಕಎರ್ಮಾಳು ಗ್ರಾಮಸ್ಥರಿಂದ ಪಂಚಾಯತ್ ಎದುರು ಪ್ರತಿಭಟನೆ ನಡೆದಿದ್ದು, ಈ ಸಂದರ್ಭ ಗ್ರಾಮ ಪಂಚಾಯತ್ ವಿರುದ್ಧ ಘೋಷಣೆ ಕೂಗಿದ ಘಟನೆ ಶನಿವಾರ ಬೆಳಿಗ್ಗೆ ನಡೆಯಿತು.
ತೆಂಕ ಗ್ರಾಮ ಪಂಚಾಯತ್ ನಲ್ಲಿ ಪ್ರತೀ ತಿಂಗಳು ಸಾಮಾನ್ಯ ಸಭೆ ನಡೆಯುತ್ತಿಲ್ಲ. ಗ್ರಾಮಸಭೆ ನಡೆಯದೆ ಸುಮಾರು ಒಂದು ವರ್ಷ ಕಳೆದರೂ ಗ್ರಾಮಸಭೆ ನಡೆದಿಲ್ಲ. ಈ ಬಗ್ಗೆ ಗ್ರಾಮಸಭೆಯನ್ನು ನಡೆಸಲು ಗ್ರಾಮಸ್ಥರು ಮನವಿಯನ್ನು ನೀಡಿದರೂ, ಪಂಚಾಯತ್ ಅಧ್ಯಕ್ಷರು ಸ್ಪಂದನೆ ನೀಡಿಲ್ಲ. ಈ ಬಾರಿ ಗ್ರಾಮ ಪಂಚಾಯತ್ನಲ್ಲಿ ಮಹಿಳಾ ಗ್ರಾಮಸಭೆ ಮತ್ತು ಮಕ್ಕಳ ಗ್ರಾಮಸಭೆಯೂ ನಡೆದಿಲ್ಲ.
ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ನಳ್ಳಿಯನ್ನು J.J.M ನವರು ಹಾಕಿದ್ದರೂ ನಳ್ಳಿಯಲ್ಲಿ ನೀರು ಬರುತ್ತಿಲ್ಲ. ಅನಧಿಕೃತ ನಳ್ಳಿ ಜೋಡಣೆ, ಹಾಗೂ ಖಾಸಗಿಯವರು ನೀರಿನ ಪೈಪನ್ನು ಕೆಡವಿದ ಬಗ್ಗೆ ಗ್ರಾಮ ಪಂಚಾಯತ್ಗೆ ತಿಳಿಸಿದರೂ ಕ್ರಮಕೈಗೊಳ್ಳದೇ ನೀರಿನ ಸಮಸ್ಯೆ ಉಂಟಾಗಿದೆ.
ಗ್ರಾಮ ಪಂಚಾಯತ್ನ ಅನುದಾನ ಹಾಗೂ ಸಿ.ಎಸ್.ಆರ್ ಅನುದಾನವನ್ನು ಅನಗತ್ಯ ಹಾಗೂ ಅರ್ಥವಿಲ್ಲದ ಹಾಗೆ ಯಾವುದೇ ಯೋಜನೆಯನ್ನು ರೂಪಿಸದೆ ಖರ್ಚು ಮಾಡಿದ್ದಾರೆ. ಗ್ರಾಮ ಪಂಚಾಯತ್ನಲ್ಲಿ ಹಣ ದುರ್ಬಳಕೆ, ಅವ್ಯವಹಾರ ನಡೆಯುತ್ತಿದ್ದು, ಬಗ್ಗೆ ತನಿಖೆ ಆಗಬೇಕು.
ತೆಂಕ ಗ್ರಾಮದಲ್ಲಿ ಸರಕಾರಿ ಭೂಮಿ, ತೋಡು, ದಾರಿ, ಕೆರೆಗಳು ಅತಿಕ್ರಮಣವಾಗುತ್ತಿದ್ದು, ಈ ಬಗ್ಗೆ ಕಂದಾಯ ಇಲಾಖೆಯಿಂದ ಸರಕಾರಿ ಭೂಮಿಯ ಪಟ್ಟಿಯನ್ನು ಪಡೆದು ನಮ್ಮ ಗ್ರಾಮದ ಸರಕಾರಿ ಸೊತ್ತುಗಳನ್ನು ಉಳಿಸಬೇಕಿದೆ.
ಯು.ಪಿ.ಸಿ ಎಲ್ ಕಂಪೆನಿಯ ಕೆಮಿಕಲ್ ಉಪ್ಪು ನೀರಿನಿಂದ ಗ್ರಾಮದ ನಿವಾಸಿಗಳ ಹಲವಾರು ಬಾವಿಗಳ ನೀರು ಕಲುಷಿತಗೊಂಡಿದ್ದು, ಈ ಬಗ್ಗೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಂದ ಸ್ಥಳ ತನಿಖೆ ಮಾಡಿ ಪರಿಶೀಲಿಸಿ, ಸೂಕ್ತ ಕ್ರಮಕೈಗೊಂಡು ಪರಿಹಾರವನ್ನು ನೀಡಬೇಕು.
ಈ ಎಲ್ಲಾ ಸಮಸ್ಯೆಗಳ ಬಗ್ಗೆ ತಾವು ಸೂಕ್ತ ಕ್ರಮಕೈಗೊಳ್ಳಬೇಕೆಂದು ಹಾಗೂ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸದೆ ಸರಕಾರದ ನಿಯಮಾವಳಿಗಳನ್ನು ಪಾಲಿಸದೆ ಇರುವ ತೆಂಕ ಗ್ರಾಮ ಪಂಚಾಯತ್ನ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕಾಪು ತಾಲೂಕು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೇಮ್ಸ್ ಡಿ ಸಿಲ್ವಾರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ತೆಂಕ ಎರ್ಮಳು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜಯಶ್ರೀ ಪೂಜಾರಿ, ಮಾಜಿ ಉಪಾಧ್ಯಕ್ಷ ರತ್ನಾಕರ ಕೋಟ್ಯಾನ್, ಮಾಜಿ ತಾಲೂಕು ಪಂಚಾಯತ್ ಸದಸ್ಯರುಗಳಾದ ಶಾರದಾ ಪೂಜಾರಿ, ಕೇಶವ ಮೊಯ್ಲಿ, ಗ್ರಾಮಸ್ಥರಾದ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಸಂತೋಷ್ ಕುಮಾರ್, ಜಯರಾಜ್ ಎರ್ಮಾಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

