ಮಲ್ಪೆ ಸಮೀಪದ ನಡುಗಡ್ಡೆ ಮಲ್ತಿ ದ್ವೀಪದಲ್ಲಿ ಮಕರ ಸಂಕ್ರಮಣ ಪೂಜೆ
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಆಯೋಜನೆಯಲ್ಲಿ ನಡೆಯುತ್ತಿರುವ ಪೂಜೆ
(Malpe) ಮಲ್ಪೆ , ಜ. 15: ಮಕರ ಸಂಕ್ರಮಣದ ಪ್ರಯುಕ್ತ ಬುಧವಾರ ಮಲ್ಪೆ ಪಡುಕರೆ ಸಮೀಪ ಸಮುದ್ರ ಮಧ್ಯೆ ಇರುವ ಮಲ್ತಿ ದ್ವೀಪದಲ್ಲಿ ವಿಶೇಷ ಪೂಜೆ ನಡೆಯಿತು.
ಕಳೆದ 12 ವರ್ಷಗಳಿಂದ ಕೊಡವೂರು ಶಂಕರನಾರಾಯಣ ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಪೂಜೆಯಲ್ಲಿ ಗ್ರಾಮದ ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.
ಪ್ರಾತಃ ಕಾಲ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತ ಜನರು ದೇಗುಲದಲ್ಲಿ ಪೂಜೆ ಸಲ್ಲಿಸಿ, ಬಳಿಕ ಮಲ್ಪೆ ಬಂದರು ಸಮೀಪದ ರಾಜರಾಜೇಶ್ವರಿ ಟೂರಿಸ್ಟ್ ಬೋಟ್ನಲ್ಲಿ ಪ್ರಯಾಣ ಬೆಳೆಸಲಾಗಿದೆ. ದೊಡ್ಡ ಬೋಟು ದ್ವೀಪದ ಸಮೀಪ ತೆರಳಲು ಸಾಧ್ಯವಿರದ ಕಾರಣ ದ್ವೀಪದಿಂದ 100 ಮೀಟರ್ ದೂರದಲ್ಲೇ ಭಕ್ತಾಧಿಗಳನ್ನು ಸಣ್ಣ ದೋಣಿಯಲ್ಲಿ ಕರೆದುಕೊಂಡು ಹೋಗಲಾಯಿತು.
ದ್ವೀಪದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ದಾರಿ ಮಾಡುತ್ತಾ ಮುಂದೆ ಸಾಗಿದಾಗ ಸಲ್ಲಿಕೆಯಾಗುವ ಪೂಜಾ ಸ್ಥಳ ಸಿಗುತ್ತದೆ.
ದೇಗುಲದ ತಂತ್ರಿಗಳಾದ ವೇದ ಮೂರ್ತಿ ಪುತ್ತೂರು ಹಯವದನ ತಂತ್ರಿ ಅವರ ನೇತೃತ್ವದಲ್ಲಿ ಪೂಜಾ ವಿದಿವಿಧಾನಗಳು ಜರಗಿದವು. ಬಳಿಕ ಸಮುದ್ರರಾಜನಿಗೆ ಪುಷ್ಪ, ಕ್ಷೀರ ಮತ್ತು ಸಿಯಾಳವನ್ನು ಸಮರ್ಪಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಪ್ರಧಾನ ಅರ್ಚಕ ಸೀತಾರಾಮ ಆಚಾರ್ಯ, ಸಮಿತಿಯ ಭಾಸ್ಕರ್ ಪಾಲನ್, ಜನಾರ್ದನ ಕೊಡವೂರು, ಪೂರ್ಣಿಮಾ ಜನಾರ್ದನ್, ಯಶೋಧರ ಸಾಲ್ಯಾನ್, ಉಷಾ ಆನಂದ ಸುವರ್ಣ, ಶೀಲ ಕೃಷ್ಣ ದೇವಾಡಿಗ, ವಾದಿರಾಜ ಸಾಲ್ಯಾನ್, ರಾಜ ಶೇರಿಗಾರ, ಪ್ರವೀಣ್, ರವಿರಾಜ್ ಸಾಲ್ಯಾನ್ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.

