“ನಮ್ಮ ಪೊಲೀಸ್ ನಮ್ಮ ಹೆಮ್ಮೆ”ಹಾಗೂ “ಡ್ರಗ್ಸ್ ಫ್ರೀ” ಓಟದಲ್ಲಿ ನಡೆದ ಘಟನೆ
(Kundapura) ಕುಂದಾಪುರ : ಸಾರ್ವಜನಿಕರ ಸ್ವಾಸ್ಥ್ಯ ಮತ್ತು ಸುರಕ್ಷತೆಯ ಆಶಯದೊಂದಿಗೆ ಭಾನುವಾರ ಬೆಳಿಗ್ಗೆ ಆಯೋಜಿಸಲಾಗಿದ್ದ “ಫಿಟ್ನೆಸ್”ಅಭಿಯಾನವೊಂದರಲ್ಲಿ ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್ ಅವರ ನಿಧನದಿಂದಾಗಿ ಕಾರ್ಯಕ್ರಮ ದುರಂತದಲ್ಲಿ ಅಂತ್ಯಗೊಂಡಿದೆ.
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ “ನಮ್ಮ ಪೊಲೀಸ್ ನಮ್ಮ ಹೆಮ್ಮೆ”ಹಾಗೂ “ಡ್ರಗ್ಸ್ ಫ್ರೀ ಕರ್ನಾಟಕ”ಓಟದ ಸಂದರ್ಭದಲ್ಲಿ ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಘಟನೆಯ ವಿವರ:
ಇಂದು ಬೆಳಿಗ್ಗೆ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಜಾಗೃತಿ ಓಟದಲ್ಲಿ ನಾಸೀರ್ ಹುಸೇನ್ ಅವರು ಉತ್ಸಾಹದಿಂದ ಭಾಗವಹಿಸಿದ್ದರು. ಸಮಾಜಕ್ಕೆ ಆರೋಗ್ಯ ಮತ್ತು ಮಾದಕ ದ್ರವ್ಯ ಮುಕ್ತ ಕರ್ನಾಟಕದ ಸಂದೇಶ ನೀಡುವ ಉದ್ದೇಶದಿಂದ ಓಡುತ್ತಿದ್ದ ಸಂದರ್ಭದಲ್ಲಿ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ನಾಸೀರ್ ಹುಸೇನ್ ಅವರು ಕೇವಲ ಒಬ್ಬ ದಕ್ಷ ಅಧಿಕಾರಿಯಾಗಿರದೆ, ಇಲಾಖೆಯ ಪ್ರತಿಯೊಂದು ರಚನಾತ್ಮಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. “ಸಾರ್ವಜನಿಕರ ಸೇವೆಗಾಗಿ ಸದಾ ಸನ್ನದ್ಧ”ಎಂಬ ಪೋಲೀಸ್ ಇಲಾಖೆಯ ಧ್ಯೇಯ ವಾಕ್ಯವನ್ನು ಅವರು ತಮ್ಮ ಕೊನೆಯ ಕ್ಷಣದವರೆಗೂ ಪಾಲಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ , ಮತ್ತು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆಯವರು ನಾಸೀರ್ ಹುಸೇನ್ ಅಕಾಲಿಕ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

