ಮೂಳೂರು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ವಿರೋಧ
ಸ್ಥಳೀಯರಿಗೆ ಸಮಸ್ಯೆ ಆಗಲಿದ್ದು, ಪ್ರರ್ಯಾಯ ಜಾಗಕ್ಕೆ ಕಾಪು ಶಾಸಕರ ಸೂಚನೆ
(Kaup) ಕಾಪು : ಮೂಳೂರು ಗ್ರಾಮದಲ್ಲಿ ಕಾಪು ಪುರಸಭೆಯ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್ಟಿಪಿ) ನಿರ್ಮಾಣ ವಿರೋಧಿಸಿ ಎಸ್.ಟಿ.ಪಿ ವಿರೋಧಿ ನಿರ್ಮಾಣ ಸಮಿತಿ ಮೂಳೂರು ವತಿಯಿಂದ ಬೃಹತ್ ಪ್ರತಿಭಟನೆ ಹಾಗೂ ಮನವಿ ಸಲ್ಲಿಕೆಯನ್ನು ಸೋಮವಾರ ಕಾಪು ತಾಲೂಕು ಆಡಳಿತ ಸೌಧದ ಮುಂಭಾಗ ಹಮ್ಮಿಕೊಳ್ಳಲಾಗಿತ್ತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ ಸ್ವೀಕರಿಸಿ, ಪುರಸಭೆಗೆ ಕೊಳಚೆ ನೀರು ಶುದ್ಧೀಕರಣ ಘಟಕ ಅತ್ಯಗತ್ಯ ಇದೆ. ಆದರೆ ಇದರಿಂದ ಸ್ಥಳೀಯರಿಗೆ ಸಮಸ್ಯೆ ಆಗಲಿದ್ದು, ಸ್ಥಳೀಯರಿಂದ ವಿರೋಧ ಇರುವುದರಿಂದ ಪರಿಸರ ಸಂಬಂಧಿ ಇತರೆ ಸಮಸ್ಯೆ ಎದುರಾಗುವುದರಿಂದ ಇದಕ್ಕೆ ಪರ್ಯಾಯವಾಗಿ ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಅಥವಾ ಬದಲಿ ಸ್ಥಳ ಗುರುತಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಮೂಳೂರು ಎಸ್.ಟಿ.ಪಿ ನಿರ್ಮಾಣ ವಿರೋಧ ಸಮಿತಿಯು ಕಾಪು ತಹಶೀಲ್ದಾರ್ ಅನಂತ ಶಂಕರ್ ಹಾಗೂ ಕಾಪು ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಅವರಿಗೆ ಮನವಿ ಸಲ್ಲಿಸಿದರು.
ನೂರಾರು ಸಂಖ್ಯೆಯಲ್ಲಿ ಮೂಳೂರು ಗ್ರಾಮಸ್ಥರು ಉಪಸ್ಥಿತರಿದ್ದರು.

