ಮಾಣಿಲ ಶ್ರೀಧಾಮದಲ್ಲಿ 48 ದಿನಗಳ ವರಮಹಾಲಕ್ಷ್ಮೀ ವ್ರತಾಚರಣೆ ಪೂರ್ವಭಾವಿ ಸಭೆ
ಆರಾಧನೆ, ಆಧ್ಯಾತ್ಮಿಕ ಚಿಂತನೆಯಿಂದ ಆತ್ಮೋನ್ನತಿ: ಶ್ರೀ ಮೋಹನದಾಸ ಸ್ವಾಮೀಜಿ
(Mangaluru) ಮಂಗಳೂರು: ಆರಾಧನೆ, ಆಧ್ಯಾತ್ಮಿಕ ಚಿಂತನೆಯಿಂದ ಆತ್ಮೋನ್ನತಿ ಸಾಧ್ಯ. ಭಜನೆ, ಧ್ಯಾನಗಳಿಂದ ಮನಸು ಪ್ರಫುಲ್ಲವಾಗಿ ನೆಮ್ಮದಿ ಪ್ರಾಪ್ತವಾಗುತ್ತದೆ ಎಂದು ಮಾಣಿಲ ಶ್ರೀಧಾಮ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಮಾಣಿಲ ಶ್ರೀಧಾಮದಲ್ಲಿ ನಡೆಯಲಿರುವ 27ನೇ ವರ್ಷದ 48 ದಿನಗಳ ವರಮಹಾಲಕ್ಷ್ಮೀ ಆಚರಣೆ ಬಗ್ಗೆ ಜೂ. 14ರ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅನುಗ್ರಹ ಸಂದೇಶ ನೀಡಿದರು.
ಮಾದಕ ವಸ್ತು ಸೇವನೆಯ ಹೊರತಾಗಿ ಕೂಡ ಜನರು ಇವತ್ತು ಹಾದಿ ತಪ್ಪುತ್ತಿದ್ದಾರೆ. ಜನರು ಮತಿ ಭ್ರಾಂತರಂತೆ ವರ್ತಿಸುತ್ತಿದ್ದಾರೆ. ಇದು ಸರಿದಾರಿಗೆ ಬರಬೇಕಾದರೆ ಆಧ್ಯಾತ್ಮವೇ ಪರಿಹಾರ. ದೇವಸ್ಥಾನ ಮತ್ತು ದೇಹದ ವ್ಯವಸ್ಥೆ ಹೊಂದಾಣಿಕೆ, ಯಾಗ, ಯಜ್ಞ, ಸಂಕೀರ್ತನೆ ಗಳಿಂದ ಭಕ್ತಿಯ ಝೇಂಕಾರ ಆದಾಗ ಒಳಿತಾಗುತ್ತದೆ. ಭಕ್ತರ ಹೃದಯದಲ್ಲಿ ನೆಲೆನಿಂತ ಮಹಾಲಕ್ಷ್ಮೀಯ ಪೂಜೆಯಿಂದ ಒತ್ತಡ ನಿವಾರಣೆ ಆಗುತ್ತದೆ ಎಂದು ಮಾಣಿಲ ಶ್ರೀಗಳು ಹೇಳಿದರು.
ಕಾರ್ಯಕ್ರಮದ ಯಶಸ್ವಿಗೆ ಸಮಿತಿಯನ್ನು ರಚಿಸಲಾಯಿತು.
ವಿವಿಧ ಕ್ಷೇತ್ರಗಳ ಗಣ್ಯರಾದ ಕೆಯ್ಯೂರು ನಾರಾಯಣ ಭಟ್, ಶ್ರೀಧರ ಬಾಳೆಕಲ್ಲು, ದೇವಪ್ಪ ಕುಲಾಲ್, ವನಿತಾ ಶೆಟ್ಟಿ, ರೇವತಿ ಪೆರ್ನೆ, ಕಲ್ಲಟೆ ವೆಂಕಟ್ರಮಣ ಭಟ್, ಹರೀಶ್ ಬೊಟ್ಟಾಡಿ, ಮುರಳೀ ಮಧೂರು, ನವೀನ್ ಪುತ್ತಿಗೆ, ರಮ್ಯಾ ಎಸ್., ಹೇಮಲತಾ ಶರ್ಮ, ಮಚ್ಚೇಂದ್ರ ಸಾಲ್ಯಾನ್, ಸತೀಶ್ ಪುಣ್ಚಿತ್ತಾಯ ಪೆರ್ಲ, ರಮೇಶ್, ಬಾಲಕೃಷ್ಣ ಶೆಟ್ಟಿ, ವೇಣುಗೋಪಾಲ ಶೇಣಿ, ನವೀನ್ ಕುಲಾಲ್, ಸುರೇಶ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಶ್ರೇಯಾ ಮತ್ತು ಶಾರ್ವಿ ಪ್ರಾರ್ಥನೆ ಹಾಡಿದರು. ಟ್ರಸ್ಟಿ ದೇವಪ್ಪ ಕುಲಾಲ್ ಸ್ವಾಗತಿಸಿದರು. ಮಚ್ಚೇಂದ್ರ ಸಾಲಿಯಾನ್ ವಂದಿಸಿದರು. ಎಚ್. ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.

