ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ಮೂರು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರ
ಕಾರ್ಯಾಗಾರ ಉದ್ಘಾಟಿಸಿದ ಕಾರ್ಯನಿರ್ವಾಹಣಾಧಿಕಾರಿ ಡಾ. ರಾಧಾಕೃಷ್ಣ ಎಸ್ ಐತಾಳ್
(Bantakal) ಬಂಟಕಲ್: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಘಟಕದ ವತಿಯಿಂದ “ಭವಿಷ್ಯದ ಶಿಕ್ಷಣಕ್ಕಾಗಿ ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಾಂಸ್ಥಿಕ ಪರಿವರ್ತನೆಗಾಗಿ ಅಧ್ಯಾಪಕರ ಸಬಲೀಕರಣ” ಎಂಬ ವಿಷಯದಕುರಿತು ಮೂರು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರವನ್ನು ಜುಲೈ 27-29 ರ ವರೆಗೆ ಆಯೋಜಿಸಲಾಯಿತು.
ಕಾರ್ಯಾಗಾರವನ್ನು ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ರಾಧಾಕೃಷ್ಣ ಎಸ್ ಐತಾಳ್ ಉದ್ಘಾಟಿಸಿದರು.
ಅವರು ಮಾತನಾಡಿ, ಅಧ್ಯಾಪಕರು ಸಮಾಜದಲ್ಲಿ ಪರಿವರ್ತನೆ ತರುವ ಪ್ರಮುಖ ಶಕ್ತಿಯಾಗಿದ್ದು, ವಿದ್ಯಾರ್ಥಿಗಳಿಗೆ ಮಾನವೀಯತೆ ಮತ್ತು ಕೌಶಲ್ಯಗಳ ಸಮನ್ವಯದಿಂದ ಅರ್ಥಪೂರ್ಣ ಶಿಕ್ಷಣ ಪ್ರೇರಣೆ ನೀಡುವ, ಮಾರ್ಗದರ್ಶನ ಮಾಡುವ ಹಾಗೂ ಮಾಹಿತಿ ಹಂಚುವ ಮುಖ್ಯ ಸಬಲೀಕರಣ ಅಧಿಕಾರಿಗಳು ಆಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಪೋರೇಟ್ ತರಬೇತುದಾರ ಹಾಗೂ ಜೀವನ ಮಾರ್ಗದರ್ಶಕ ಪ್ರವೀಣ್ ವಿ ಗುಡಿಯವರು ಮಾತನಾಡಿ, ಶಿಕ್ಷಣದಲ್ಲಿ ತಲೆ, ಹೃದಯ ಮತ್ತು ಕೈ ಪರಿಕಲ್ಪನೆಯ ಮಹತ್ವದ ಬಗ್ಗೆ ತಿಳಿಸಿ, ಜ್ಞಾನ, ಮಾನವಿಯತೆ ಮತ್ತು ಕೌಶಲ್ಯಗಳ ಸಮನ್ವಯದಿಂದ ಅರ್ಥಪೂರ್ಣ ಶಿಕ್ಷಣ ಸಾಧ್ಯ ಎಂದರು.
ಸಂಸ್ಥೆಯ ಪ್ರಾಂಶುಪಾಲ ಡಾ. ನಾಗರಾಜ್ ಭಟ್ ಮಾತನಾಡಿ, ಇಂದಿನ ಜೆನ್ – ಝಡ್ ವಿದ್ಯಾರ್ಥಿಗಳ ಅಗತ್ಯತೆಗೆ ಅನುಗುಣವಾಗಿ ತಂತ್ರಜ್ಞಾನ ಆಧಾರಿತ ಹಾಗೂ ವಿದ್ಯಾರ್ಥಿ ಕೇಂದ್ರಿತ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಅಧ್ಯಾಪಕರಿಗೆ ಸಲಹೆ ನೀಡಿದರು.
ಸಂಸ್ಥೆಯ ಶೈಕ್ಷಣಿಕ ಡೀನ್ ಡಾ. ಸುದರ್ಶನ್ ರಾವ್ ಸ್ವಾಗತಿಸಿದರು. ಆಂತರಿಕ ಗುಣಮಟ್ಟ ಘಟಕದ ಸಂಯೋಜಕಿ ಶ್ರೀಮತಿ ಸುಬ್ಬುಲಕ್ಷ್ಮೀ ಎನ್ ಕಾರಂತ್ ವಂದಿಸಿದರು.
ಮೂರುದಿನಗಳ ಕಾಲ ನಡೆಯುವ ಈ ಕಾರ್ಯಾಗಾರದಲ್ಲಿ ಮೈಂಡ್‌ಫುಲ್ ನೆಸ್, ಭಾವನಾತ್ಮಕ ಸ್ತೈರ್ಯ, ಕಾರ್ಯಸ್ಥಳದ ಆರೋಗ್ಯ, ಜೆನ್ –ಝಡ್ ವಿದ್ಯಾರ್ಥಿಗಳ ಮನೋವಿಜ್ಞಾನ, ಉದ್ಯಮಶೀಲತೆ ಹಾಗೂ ಭಾರತೀಯ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳ ಕುರಿತು ವಿಶೇಷ ಉಪನ್ಯಾಸಗಳು ನಡೆಯಲಿದೆ.

