ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಬಂಟ್ವಾಳದಲ್ಲೂ ದೂರು ದಾಖಲು
ಉಡುಪಿಯಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ವಿರುದ್ದ ಯಶ್ಪಾಲ್ ದ್ವೇಷ ಭಾಷಣ
(Bantwala) ಬಂಟ್ವಾಳ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ನೀಡಿರುವ ಅವಹೇಳನಕಾರಿ ಹೇಳಿಕೆ ವಿರುದ್ದ ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪೊಲೀಸ್ ಅಧಿಕಾರಿಯವರನ್ನು ಆಗ್ರಹಿಸಿದ್ದಾರೆ.
ಪ್ರಸಕ್ತ ಶಾಂತಿಯುತವಾಗಿರುವ ಅವಿಭಜಿತ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಪ್ರಚೋದಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಗಲಭೆ ಎಬ್ಬಿಸುವ ಹುನ್ನಾರ ಮತ್ತು ಬಿಜೆಪಿಯಲ್ಲಿ ಅವರ ಅಸ್ತಿತ್ವ ಉಳಿಸಿಕೊಳ್ಳಲು ಇಂತಹ ಹೇಳಿಕೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬಂಟ್ವಾಳ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಲಾದ್ರು ಮಿನೇಜಸ್, ಪಾಣೆಮಂಗಳೂರು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಎ.ಬಿ. ಅಬ್ದುಲ್ಲ, ಪ್ರಮುಖರಾದ ಗಣೇಶ ಶೆಟ್ಟಿ ಗೋಳ್ತಮಜಲು, ಮಹಮ್ಮದ್ ನಂದಾವರ, ಸಿದ್ದಿಕ್ ಸೆರಾವು, ಸಿರಾಜ್ ಮದಕ, ಮಹಮ್ಮದ್ ಮಂಚಿ ಮತ್ತಿತರರು ನಿಯೋಗದಲ್ಲಿದ್ದರು.

