ಏಳೂರು ಮೊಗವೀರ ಮಹಾಸಭಾದಿಂದ ಸಮುದ್ರ ಪೂಜೆ, ಸಮುದ್ರಕ್ಕೆ ಹಾಲೆರೆದ ಮೀನುಗಾರರು
ಹೆಜಮಾಡಿ ಅಮಾಸೆಕರಿಯ ಸಮುದ್ರಕ್ಕೆ ಪೂಜೆ, ಸಾಮೂಹಿಕ ಪ್ರಾರ್ಥನೆ
(Hejamadi) ಹೆಜಮಾಡಿ : ಏಳೂರು ಮೊಗವೀರ ಮಹಾಸಭಾ ಆಯೋಜನೆಯಲ್ಲಿ ಶುಕ್ರವಾರ ಹೆಜಮಾಡಿ ಅಮಾಸೆಕರಿಯ ಸಮುದ್ರಕ್ಕೆ ವಿಶೇಷ ಪೂಜೆ ನಡೆಸಿ ಸಮುದ್ರಕ್ಕೆ ಹಾಲು ಮತ್ತು ತೆಂಗಿನಕಾಯಿಯನ್ನು ಅರ್ಪಿಸಲಾಯಿತು.
ಹೆಜಮಾಡಿ, ಕನ್ನಂಗಾರು, ಪಲಿಮಾರು, ಗುಂಡಿ, ಸಣ್ಣ ಗುಂಡಿ, ಮಟ್ಟು, ಆಚೆ ಮಟ್ಟು ಮೊಗವೀರ ಮಹಾ ಸಭಾದ ಸದಸ್ಯರಿಂದ ಮೊದಲಿಗೆ ಸ್ಥಳೀಯ ಭಜನಾ ಮಂದಿರಗಳಲ್ಲಿ ಪೂಜೆ ಸಲ್ಲಿಸಿ, ತೆಂಗಿನಕಾಯಿ, ಹೂವು, ಹಾಲನ್ನು ಭಜನೆಯ ಮೂಲಕ ಸಮುದ್ರ ಕಿನಾರೆಗೆ ತರಲಾಯಿತು.
ಸಮುದ್ರ ಕಿನಾರೆಯಲ್ಲಿ ಹಾಲು ಸಹಿತ ಎಲ್ಲಾ ವಸ್ತುಗಳನ್ನು ಜೋಡಿಸಿದ ಬಳಿಕ ಪೂಜೆ ಸಲ್ಲಿಸಿ, ಸಾಮೂಹಿಕ ಪ್ರಾರ್ಥನೆಯ ಬಳಿಕ ಸಮುದ್ರಕ್ಕೆ, ಹಾಲು ಮತ್ತು ತೆಂಗಿನಕಾಯಿಯನ್ನು ಸಮರ್ಪಿಸಲಾಯಿತು.
ಈ ಸಂದರ್ಭ ಏಳೂರು ಮೊಗವೀರ ಮಹಾಸಭಾಧ್ಯಕ್ಷ ದಿವಾಕರ ಹೆಜಮಾಡಿ, 16 ಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಎಚ್ ರವಿ ಕುಂದರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಮಟ್ಟು, ಕೃಷ್ಣ ಗುರಿಕಾರ, ಪ್ರತಿ ಗ್ರಾಮ ಸಭೆಯ ಅಧ್ಯಕ್ಷರು, ಏಳೂರು ಮೊಗವೀರ ಮಹಾಸಭಾದ ಸರ್ವ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

