ಜಿಯಾನ್ ಕಂಪನಿಗೆ ನಿರ್ಮಾಣ ಕಾಮಗಾರಿ ಹಣ ಪಾವತಿಸದೆ ಕೋಟ್ಯಂತರ ರೂ. ವಂಚನೆ
ಜಿಯಾನ್ ಕನ್ಸಕ್ಷನ್ಸ್ ಪ್ರೈವೇಟ್ ಲಿ. ಸಂಸ್ಥೆಯ ಗುಲಾಮ್ ಮೊಹಮ್ಮದ್ ರವರಿಂದ ದೂರು
(Udupi) ಉಡುಪಿ: ಜಿಯಾನ್ ಕನ್ಸಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನಿರ್ಮಾಣ ಕಾಮಗಾರಿಯ ಹಣ ಪಾವತಿಸದೆ ವಂಚನೆ ಮಾಡಿರುವುದಲ್ಲದೆ, ಕಂಪನಿಯ ದಾಖಲೆಗಳಿದ್ದ ಲ್ಯಾಪ್‌ಟಾಪ್ ಮತ್ತು ಪ್ರಿಂಟರ್ ಕಳವು ಮಾಡಿ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಖಾಸಗಿ ಪಿರ್ಯಾದಿ ಸಲ್ಲಿಸಲಾಗಿದೆ.
ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 124/2025ರ ಸಾರಾಂಶದಂತೆ, ಪಿರ್ಯಾದಿದಾರ ಗುಲಾಮ್ ಮೊಹಮ್ಮದ್ ಅವರು ಜಿಯಾನ್ ಕನ್ಸಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ನಡೆಸುತ್ತಿದ್ದು, ಕರ್ನಾಟಕದಾದ್ಯಂತ ಸ್ಥಿರಾಸ್ತಿ ಅಭಿವೃದ್ಧಿ ಮತ್ತು ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ.
2020-21ನೇ ಸಾಲಿನಲ್ಲಿ ಆರೋಪಿಗಳಾದ ಪಿ. ರಜಾಬ್ ಬ್ಯಾರಿ ಮತ್ತು ಮೊಹಮ್ಮದ್ ಅಶ್ರಫ್ ಅವರು ಉಡುಪಿ ಜಿಲ್ಲೆಯ ಪಾದೆಬೆಟ್ಟು ಹಾಗೂ ಶಿವಳ್ಳಿ ಗ್ರಾಮಗಳಲ್ಲಿರುವ ತಮ್ಮ ಸ್ಥಿರಾಸ್ತಿಗಳ ಅಭಿವೃದ್ಧಿಗಾಗಿ ವಸತಿ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಪಿರ್ಯಾದಿದಾರರ ಸಂಸ್ಥೆಗೆ ವಹಿಸಿದ್ದರು. ಈ ಸಂಬಂಧ 2020ರ ನವೆಂಬರ್ 28ರಂದು ಇಬ್ಬರೂ ಆರೋಪಿಗಳು ವಕೀಲರು ಹಾಗೂ ನೋಟರಿ ನಾರಾಯಣ ಕೆ. ಚೌಟ ಅವರ ಸಮ್ಮುಖದಲ್ಲಿ ಜಿಪಿಎ ಮಾಡಿಕೊಂಡು ಆಸ್ತಿಗಳ ಅಭಿವೃದ್ಧಿಗೆ ಅವಕಾಶ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಮಗಾರಿಗೆ ಸಂಬಂಧಿಸಿದಂತೆ ಪಿರ್ಯಾದಿದಾರರು ಆರೋಪಿಗಳಿಗೆ ಬಿಲ್‌ಗಳನ್ನು ನೀಡುತ್ತಿದ್ದು, ಆರೋಪಿಗಳು ಬಿಲ್‌ಗಳ ಹಣವನ್ನು ಸಮಯಕ್ಕೆ ಸರಿಯಾಗಿ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಕಾಮಗಾರಿಗಾಗಿ ಹಣದ ವ್ಯವಸ್ಥೆ ಮಾಡಲು ಪಿರ್ಯಾದಿದಾರರು ತಮ್ಮ ಹಾಗೂ ಕುಟುಂಬ ಸದಸ್ಯರ ಚಿನ್ನಾಭರಣಗಳನ್ನು ಅಡಮಾನವಿಟ್ಟು ಹಣ ಹೊಂದಿಸಿದ್ದರು ಎನ್ನಲಾಗಿದೆ.
ಆರೋಪಿ ಪಿ. ರಜಾಬ್ ಬ್ಯಾರಿ ಅವರು ₹7,88,359 ಹಾಗೂ ಮೊಹಮ್ಮದ್ ಅಶ್ರಫ್ ಅವರು ₹1,20,04,155 ಪಾವತಿಸಬೇಕಿದ್ದು, ಒಟ್ಟು ₹1,27,92,514 ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಪಿರ್ಯಾದಿಯಲ್ಲಿ ಉಲ್ಲೇಖಿಸಲಾಗಿದೆ
ಹಲವು ಬಾರಿ ಹಣ ಪಾವತಿಸುವಂತೆ ಕೇಳಿಕೊಂಡರೂ ಆರೋಪಿಗಳು ಒಂದಲ್ಲೊಂದು ಕಾರಣ ನೀಡಿ ಹಣ ಪಾವತಿಯನ್ನು ಮುಂದೂಡುತ್ತಿದ್ದರು. ಈಗಾಗಲೇ ಆಸ್ತಿ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದರೂ, ಹಣ ಪಾವತಿಸದೆ ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಪಿರ್ಯಾದಿದಾರರು ಆರೋಪಿಸಿದ್ದಾರೆ.
ಇದಲ್ಲದೆ, 2025ರ ಜುಲೈ 9ರಂದು ಎರಡನೇ ಆರೋಪಿ ಕಂಪನಿಯ ಪ್ರಮುಖ ದಾಖಲೆಗಳಿದ್ದ ಲ್ಯಾಪ್‌ಟಾಪ್ ಮತ್ತು ಪ್ರಿಂಟರ್‌ನ್ನು ಕದ್ದುಕೊಂಡು ಹೋಗಿದ್ದು, ಈ ಬಗ್ಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಪಿರ್ಯಾದಿಯಲ್ಲಿ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದಂತೆ ಉಡುಪಿ ನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು ಆರೋಪಗಳ ಕುರಿತು ತನಿಖೆ ಹಾಗೂ ಕಾನೂನು ಪ್ರಕ್ರಿಯೆ ನಡೆಯಬೇಕಿದೆ.

