ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಗೆ ರೂ. 90.17 ಲಕ್ಷ ನಿವ್ವಳ ಲಾಭ
ಶೇ.15 ಡಿವಿಡೆಂಟ್ ಘೋಷಿಸಿದ ಕೋ–ಆಪರೇಟಿವ್ ಸೊಸೈಟಿ
(Shirooru) ಶಿರೂರು: ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶಿರೂರು ಇದರ ವಾರ್ಷಿಕ ಸಾಮಾನ್ಯ ಸಭೆಯು ಆಮ್ರಕಲ್ಲು ಹಿಲಿಯಾಣದ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ನಾಯ್ಕ ಶೇಡಿಕೊಡ್ಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು 2026ರ ಆರ್ಥಿಕ ವರ್ಷಾಂತ್ಯಕ್ಕೆ ಒಟ್ಟು ರೂ.252 ಕೋಟಿ ವ್ಯವಹಾರ ನಡೆಸಿದ್ದು, ರೂ.52 ಕೋಟಿ ಠೇವಣಿ ಹಾಗೂ ರೂ.42.32 ಕೋಟಿ ಹೊರಬಾಕಿ ಸಾಲ ಹೊಂದಿದೆ. ಲೆಕ್ಕಪರಿಶೋಧನೆಯಲ್ಲಿ ́ಎ’ತರಗತಿ ಪಡೆದಿರುವ ಸಂಘವು ವರದಿ ಸಾಲಿನಲ್ಲಿ ರೂ.90.17 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪ್ರಗತಿಪರ ಕೃಷಿಕ ಹಾಗೂ ಹಿರಿಯ ಸದಸ್ಯರಾದ ಕುಯಿರ ನಾಯ್ಕ ಕಂಡಿಕೆ, ನೆಡೂರು, ಸಮಾಜ ಸೇವೆಗಾಗಿ ಬಡಿಯ ನಾಯ್ಕ ನಾಲ್ಕೂರು, ಯಕ್ಷಗಾನ ಕ್ಷೇತ್ರದಲ್ಲಿ ಚಂಡೆವಾದಕ ಶ್ರೀಧರ ಹಿಲಿಯಾಣ, ಶೈಕ್ಷಣಿಕ ಸಾಧನೆಗಾಗಿ ಕುಮಾರಿ ವಿಜಯಲಕ್ಷ್ಮೀ ಹಾಗೂ ಬಾಲ ಪ್ರತಿಭೆ ಮತ್ತು ಕ್ರೀಡಾ ಸಾಧನೆಗಾಗಿ ಪ್ರಥ್ವಿಕ್ ಕುಮಾರ ಮಂದಾರ್ತಿ ಅವರನ್ನು ಸನ್ಮಾನಿಸಲಾಯಿತು.
ಅಶಕ್ತ 12 ಮಂದಿ ಸದಸ್ಯರಿಗೆ ವೈದ್ಯಕೀಯ ನೆರವು ನೀಡಲಾಯಿತು.
ವರದಿ ವರ್ಷದಲ್ಲಿ 114 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ, 66 ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ 8 ವಿದ್ಯಾರ್ಥಿಗಳಿಗೆ, ಒಟ್ಟು 188 ವಿದ್ಯಾರ್ಥಿಗಳಿಗೆ ಸುಮಾರು ರೂ.4.33 ಲಕ್ಷ ವಿದ್ಯಾರ್ಥಿವೇತನ ವಿತರಿಸಲಾಯಿತು.
ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಯಶಪಾಲ್ ಎ. ಸುವರ್ಣ ಅವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದರು.
ಈ ಸಂದರ್ಭ ಅವರು ಮಾತನಾಡಿ, 23 ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘವನ್ನು ಸ್ಥಾಪಿಸಿ, ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ಸಬಲೀಕರಣದ ಜೊತೆಗೆ ಶೈಕ್ಷಣಿಕ ಪ್ರೋತ್ಸಾಹ ನೀಡುತ್ತಾ, ಶಿರೂರು ಮತ್ತು ಮುದ್ದೂರಿನಲ್ಲಿ ಸ್ವಂತ ಕಟ್ಟಡಗಳನ್ನು ಹೊಂದಿ, ನಿರಂತರವಾಗಿ ಶೇ. 15 ಡಿವಿಡೆಂಡ್ ನೀಡುತ್ತಾ ಬಂದಿರುವ ಶ್ರೀ ಮಲ್ಲಿಕಾರ್ಜುನ ಸಹಕಾರಿ ಸಂಘವು ಜಿಲ್ಲೆಯ ಪ್ರತಿಷ್ಠಿತ ಪತ್ತಿನ ಸಹಕಾರಿ ಸಂಘವಾಗಿ ಸತತವಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ‘ಸಾಧನ’ಪ್ರಶಸ್ತಿ ಪಡೆಯುತ್ತಿರುವುದು ಸಹಕಾರಿ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ಪ್ರತಾಪ ಹೆಗ್ಡೆ ಮಾರಾಳಿ, ಕುಡುಬಿ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಪ್ರಭಾಕರ ನಾಯ್ಕ ಕಲ್ಮರ್ಗಿ, ಸಂಘದ ಉಪಾಧ್ಯಕ್ಷ ಸಿದ್ಧಾರ್ಥ ನಾಯ್ಕ ನರಿಕೊಡ್ಲು, ನಿರ್ದೇಶಕರಾದ ಎಚ್. ಬೆಳ್ಳ ನಾಯ್ಕ ಕೊಕ್ಕರ್ಣೆ, ಜಯಪ್ರಕಾಶ ನಾಯ್ಕ ಅಲ್ತಾರು, ವಸಂತ ನಾಯ್ಕ ಒಳಬೈಲ್, ದಿನೇಶ ನಾಯ್ಕ ಹೊರ್ಲಾಳಿ, ನರಸಿಂಹ ನಾಯ್ಕ ಯಡ್ತಾಡಿ, ಮಹಾದೇವ ನಾಯ್ಕ ಬಿಲ್ಲಾಡಿ, ಶ್ರೀಮತಿ ಲಲಿತಾ ಬಿಲ್ಲಾಡಿ ಹಾಗೂ ಶ್ರೀಮತಿ ಪಾರ್ವತಿ ಗೋಳಿಯಂಗಡಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಸಿದ್ಧಾರ್ಥ ನಾಯ್ಕ ಸ್ವಾಗತಿಸಿದರು. ನಿರ್ದೇಶಕ ಮಹಾದೇವ ಅವರು 2026-27ನೇ ಸಾಲಿನ ಬಜೆಟ್ ಮಂಡಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರಸಿಂಹ ನಾಯ್ಕ ಮಂದಾರ್ತಿ ಅವರು ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಶಾಖಾ ವ್ಯವಸ್ಥಾಪಕರಾದ ಕೃಷ್ಣ ನಾಯ್ಕ ಮತ್ತು ಗಣೇಶ ಹಿಲಿಯಾಣ ಅವರು ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ವಸಂತ ನಾಯ್ಕ ವಂದಿಸಿದರು. ಸಿಬ್ಬಂದಿ ವಿಘ್ನೇಶ ಕಾರ್ಯಕ್ರಮ ನಿರೂಪಿಸಿದರು.

