ಉಡುಪಿ; ಕೃಷ್ಣನ ನಾಡಲ್ಲಿ ಅಷ್ಟಮಿ ಸಿದ್ದತೆ, ವಿಟ್ಲಪಿಂಡಿ ಸಂಭ್ರಮ
ಅಬ್ಬರಿಸಲಿದ್ದಾರೆ ಹುಲಿ ವೇಷಧಾರಿಗಳು, ಮೊಸರು ಕುಡಿಕೆ
(Udupi) ಉಡುಪಿ: ಪೊಡವಿಗೊಡೆಯನ ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಸೆ.4ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆ.5ರಂದು ಶ್ರೀಕೃಷ್ಣ ಲೀಲೋತ್ಸವ (ವಿಟ್ಲ ಪಿಂಡಿ) ಅದ್ದೂರಿಯಾಗಿ ನಡೆಯಲಿದೆ.
ಮೊಸರು ಕುಡಿಕೆ, ಹುಲಿವೇಷಧಾರಿಗಳ ಅಬ್ಬರ, ಜನಪದ ಕಲಾ ತಂಡಗಳು ಉಡುಪಿಯಲ್ಲಿ ಮೇಳೈಸಲಿದ್ದು, ಈ ಸೊಬಗನ್ನು ಕಣ್ಣುಂಬಿಕೊಳ್ಳಲು ಭಕ್ತಾದಿಗಳು ಉಡುಪಿಗೆ ಆಗಮಿಸಲಿದ್ದಾರೆ.
ಉಡುಪಿಯಲ್ಲಿ ಅಷ್ಟಮಿ ಆಚರಣೆ ಭಿನ್ನ. ಮೊಸರು ಕುಡಿಕೆ ಉತ್ಸವಕ್ಕಾಗಿ ರಥಬೀದಿಯಲ್ಲಿ ತ್ರಿಕೋನಾ ಕೃತಿಯ ಗುರ್ಜಿಗಳನ್ನು ಅಳವಡಿಸಲಾಗುತ್ತದೆ. ನಗರದ ನಾನಾ ಕಡೆಗಳಲ್ಲಿ ಹುಲಿವೇಷಧಾರಿಗಳ ಅಬ್ಬರವೂ ಜೋರಾಗಿರಲಿದೆ..
ಇಲ್ಲಿಯ ವಿಶೇಷ ಮೊಸರು ಕುಡಿಕೆ ಉತ್ಸವ:
ಕೃಷ್ಣ ಮಠದ ಸುತ್ತಲೂ ಪ್ರತಿ ಗುರ್ಜಿಗಳಲ್ಲೂ ತಲಾ ಮೂರು ಕುಡಿಕೆ ಇರಿಸಲಾಗುತ್ತಿದ್ದು, ಕುಡಿಕೆಗಳಲ್ಲಿ ಮೊಸರು, ಅರಳಿನ ಹುಡಿ, ಅರಿಶಿನ-ಕುಂಕುಮ ಸಹಿತ ಬಣ್ಣಗಳ ನೀರನ್ನು ತುಂಬಿಸಿ ಎತ್ತರದಲ್ಲಿ ಕಟ್ಟಲಾಗುತ್ತದೆ. ವಿಟ್ಲ ಹಿಂಡಿ ರಥೋತ್ಸವದ ವೇಳೆ ಶ್ರೀಕೃಷ್ಣ ಮಠದಲ್ಲಿ ಗೋವುಗಳ ಆರೈಕೆ ಮಾಡುವ ಗೋಪಾಲಕರು ಗೊಲ್ಲರ ವೇಷ ಧರಿಸಿ ಮೊಸರು ಕುಡಿಕೆ ಒಡೆಯುತ್ತಾರೆ.
ದೊಡ್ಡ ಕುಡಿಕೆಯಲ್ಲಿ ಅರಳಿನ ಹುಡಿ ಮತ್ತು ತೆಂಗಿನ ಕಾಯಿ ಇಡಲಾಗುತ್ತದೆ. ದೊಡ್ಡ ಮಡಕೆಗಳನ್ನು ಒಳಗೊಂಡ ಒಟ್ಟು 47 ಮಣ್ಣಿನ ಕುಡಿಕೆಗಳನ್ನು ಕಲಾತ್ಮಕವಾಗಿ ಚಿತ್ರಿಸಲಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಥಬೀದಿ ಸುತ್ತ ಗುರ್ಜಿ ಅಳವಡಿಸುವ ಕಾರ್ಯ ನಡೆಯುತ್ತಿದೆ.
ವಿಟ್ಲ ಪಿಂಡಿ ಉತ್ಸವದಲ್ಲಿ ಮೊಸರು ಕುಡಿಕೆ ಒಡೆ ಒಡೆಯುವುದು ಪ್ರಮುಖ ಆಕರ್ಷಣೆ. ರಥಬೀದಿಯಲ್ಲಿ ಈ ಸಂಭ್ರಮಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಮರದ ತ್ರಿಕೋನಾಕೃತಿಯ 13 ಗುರ್ಜಿಗಳನ್ನು ನಿರ್ಮಿಸಲಾಗಿದೆ. ರಥಬೀದಿ, ತೆಂಕಪೇಟೆ ಮತ್ತು ಕನಕ ಗೋಪುರದ ಮುಂಭಾಗ ಎರಡು ದಿಕ್ಕಿನಲ್ಲಿ ಬೃಹತ್ ಮಂಟಪದ ಗುರ್ಜಿ ನಿರ್ಮಿಸಲಾಗಿದೆ. ಅಷ್ಟ ಮಠಕ್ಕೆ ಸಂಬಂಧಿಸಿದ, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ 2 ಗುರ್ಜಿಗಳು, 2 ಮಂಟಪ ಗುರ್ಜಿಗಳು ಸೇರಿ ಒಟ್ಟು 13 ಗುರ್ಜಿಗಳನ್ನು ಹಾಕಲಾಗಿದೆ.
ಈ ಬಾರಿಯ ವಿಶೇಷ ಮಲ್ಲಯುದ್ಧ:
ಶ್ರೀಕೃಷ್ಣ ಜನ್ಮಾಷ್ಟಮಿಯ ಮರುದಿನ ಸೆ.5 ರಂದು ವಿಟ್ಲ ಹಿಂಡಿ- ಶ್ರೀಕೃಷ್ಣ ಲೀಲೋತ್ಸವ ನಡೆಯಲಿದ್ದು, ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಯಯ ಮೂರ್ತಿಯ ರಥೋತ್ಸವ ಜರುಗಲಿದೆ.
ಮೊಸರು ಕುಡಿಕೆ, ಜನಪದ ಜತೆಗೆ ಕಲಾತಂಡಗಳ ಮೆರವಣಿಗೆಯ ಪರ್ಯಾಯ ಶಿರೂರು ಮಠದ ಮುಂಭಾಗದಲ್ಲಿ ವಿಶೇಷವಾಗಿ ನಿರ್ಮಿಸಿರುವ ವೇದಿಕೆಯಲ್ಲಿ ಆಹ್ವಾನಿತ ಮಲ್ಲಯುದ್ಧ ಪ್ರವೀಣರಿಂದ ಮಲ್ಲಯುದ್ಧ ಪ್ರದರ್ಶನ ನಡೆಯಲಿದೆ.
ಹುಲಿ ವೇಷಕ್ಕೆ ನೋಟಿನ ಮಾಲೆ:
ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ದಿನದಂದು ರಾಜಾಂಗಣದಲ್ಲಿ ಹುಲಿವೇಷ ಕುಣಿತ ಸ್ಪರ್ಧೆ ನಡೆಯಲಿದೆ. ಮಠದ ವತಿಯಿಂದ ಪ್ರತಿ ಹುಲಿವೇಷಧಾರಿಗಳಿಗೆ ತಲಾ 500 ರೂ. ಮಾಲೆ ಹಾಗೂ ಸಂಭಾವನೆ ನೀಡಲಾಗುತ್ತಿದೆ. ಇದಕ್ಕಾಗಿ 100 ರೂ., 50 ರೂ., 20 ರೂ., 10 ರೂ.ಗಳ ಈಗಾಗಲೇ 20ಕ್ಕೂ ಅಧಿಕ ಹುಲಿವೇಷ ತಂಡಗಳು ಒಂದು ಸಾವಿರ ಮಾಲೆ ತಯಾರಿಸಲಾಗುತ್ತದೆ.
ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಕಳೆದೊಂದು ತಿಂಗಳಿನಿಂದ ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮ ಶೀರ್ಷಿಕೆಯಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಂಸ್ಕೃತಿಕ ಕಲರವ ಸೃಷ್ಟಿಸಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಭಕ್ತರು, ಮಠದ ಸಿಬ್ಬಂದಿಗೆ ವಿವಿಧ ಸ್ಪರ್ಧೆಗಳು ನಡೆದಿವೆ. ಹುಲಿವೇಷ ಸ್ಪರ್ಧೆಗೆ ಲಕ್ಷಾಂತರ ರೂ. ಮೌಲ್ಯದ ಬಹುಮಾನ ನಿಗದಿ ಮಾಡಿದ್ದಾರೆ.

