ಪಡುಕರೆ: ಮುದ್ದು ಕೃಷ್ಣ ವೇಷ ಸ್ಪರ್ಧೆ ಸಂಪನ್ನ
ಕಡೆಕಾರು–ಪಡುಕರೆ ಶ್ರೀ ಕೃಷ್ಣ ಮಾರುತಿ ವ್ಯಾಯಾಮ ಶಾಲೆ, ಪಡುಕರೆ ಆಯೋಜನೆ
(Udupi) ಉಡುಪಿ: ಶ್ರೀ ಕೃಷ್ಣ ಮಾರುತಿ ವ್ಯಾಯಾಮಶಾಲೆ, ಕಡೆಕಾರು–ಪಡುಕರೆ ಇದರ ವತಿಯಿಂದ ಪ್ರಥಮ ವರ್ಷದ ಮುದ್ದು ಕೃಷ್ಣ ವೇಷ ಸ್ಪರ್ಧೆ ಪಡುಕರೆಯಲ್ಲಿ ಸಂಭ್ರಮದಿಂದ ನಡೆಯಿತು.
ಶ್ರೀಕೃಷ್ಣ ಜನ್ಮಾಷ್ಟಮಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಮಕ್ಕಳಲ್ಲಿ ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾದ ಸ್ಪರ್ಧೆಯಲ್ಲಿ ಪುಟಾಣಿ ಮಕ್ಕಳು ವಿವಿಧ ರೀತಿಯ ಕೃಷ್ಣ ವೇಷ ಧರಿಸಿ ಗಮನ ಸೆಳೆದರು. ಮುದ್ದು ಕೃಷ್ಣನ ವಿವಿಧ ಭಂಗಿ, ಅಲಂಕಾರ ಹಾಗೂ ಅಭಿನಯದ ಮೂಲಕ ಮಕ್ಕಳು ನೆರೆದಿದ್ದವರ ಮನಸೂರೆಗೊಂಡರು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಪೂರ್ಣಿಮಾ ಜನಾರ್ದನ್ ಅವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಮಕ್ಕಳಲ್ಲಿ ನಮ್ಮ ನಾಡಿನ ಧಾರ್ಮಿಕ, ಸಾಂಸ್ಕೃತಿಕ ಪರಂಪರೆ ಮತ್ತು ಮೌಲ್ಯಗಳನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವ ಇಂತಹ ಸ್ಪರ್ಧೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ನಡೆಯಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಮನ್ ಪಡುಕರೆ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪಡುಕರೆ ಮಹಿಳಾ ಮಂಡಲದ ಅಧ್ಯಕ್ಷೆ ಸುಶೀಲ ಜಗನ್ನಾಥ, ಮಲ್ಪೆಯ ಉದ್ಯಮಿಗಳಾದ ಅಶೋಕ್ ಮೆಂಡನ್ ಹಾಗೂ ಸಂದೀಪ್ ಕಡೆಕಾರ್ ಉಪಸ್ಥಿತರಿದ್ದರು.
ಪುಟಾಣಿಗಳ ಕೃಷ್ಣ ವೇಷ, ಅವರ ಮುಗ್ಧ ಅಭಿನಯ ಹಾಗೂ ಸಂಭ್ರಮದ ವಾತಾವರಣ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಪೋಷಕರು, ಗಣ್ಯರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.

