ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ : ಉಡುಪಿ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣದಲ್ಲಿ ಪ್ರಜಾಸೇವೆ ಉದ್ಘಾಟನೆ
(Udupi) ಉಡುಪಿ : ಜನರ ಸಮಸ್ಯೆ ಹಾಗೂ ಅಹವಾಲುಗಳನ್ನು ಅವರಿರುವಲ್ಲಿಯೇ ಆಲಿಸಿ, ಸ್ಥಳದಲ್ಲಿಯೇ ಪರಿಹಾರ ನೀಡಲು ಸರಕಾರವು ಮಹತ್ವಕಾಂಕ್ಷಿ ಯೋಜನೆಯಾದ ಪ್ರಜಾಸೇವಾ ಆಂದೋಲನ ಸಭೆಗಳನ್ನು ರಾಜ್ಯದಾದ್ಯಂತ ಆಯೋಜಿಸುವುದರೊಂದಿಗೆ ಆ ಮೂಲಕ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಹೇಳಿದರು.
ಅವರು ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಪ್ರಜಾಸೇವಾ ಇಲಾಖೆ ಹಾಗೂ ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸೆಪ್ಟೆಂಬರ್ 5 ರಂದು ವಿಜಯನಗರ ಜಿಲ್ಲೆಯಲ್ಲಿ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಜಾಸೇವೆ ಆಂದೋಲನ ಸಭೆಗೆ ಚಾಲನೆ ನೀಡಿದ್ದು, ರಾಜ್ಯದಾದ್ಯಂತ ಏಕಕಾಲಕ್ಕೆ ಕಾರ್ಯಕ್ರಮ ಆಯೋಜಿಸಲು ನಿರ್ಧಾರಿಸಲಾಗಿತ್ತು. ಆದರೆ ಉಡುಪಿಯಲ್ಲಿ ಆ ದಿನದಂದು ಜಿಲ್ಲೆಯ ಜನತೆಯ ಅತೀ ದೊಡ್ಡ ಹಬ್ಬವಾದ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ಇದ್ದು, ಸಾರ್ವಜನಿಕರು ಈ ಸಂದರ್ಭದಲ್ಲಿ ತಮ್ಮ ಅಹವಾಲು/ ಸಮಸ್ಯೆಗಳನ್ನು ಸಲ್ಲಿಸಲು ಅಸಾಧ್ಯವೆಂದು ತಿಳಿದು ಈ ದಿನದಂದು ಸಭೆ ಆಯೋಜಿಸಲಾಗಿದೆ ಎಂದರು.
ಜನರು ಯಾವ ಸಮಸ್ಯೆಗಳಿಂದ ಹೈರಾಣಗಿದ್ದಾರೆ, ಅವರ ಪರಿಸ್ಥಿತಿಯನ್ನು ಅರಿತು ಅದನ್ನು ಮೌಲ್ಯಮಾಪನ ಮಾಡಲು ಪಾಲಿಸಿ ತರುವುದೇ ಸರಕಾರದ ಕೆಲಸ. ಆಯಾ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಒಂದನೇ ಹಾಗೂ ಮೂರನೇ ಶನಿವಾರದಂದು ತಾಲೂಕು ಮಟ್ಟದಲ್ಲಿ ಹಾಗೂ ಎರಡು ಮತ್ತು ನಾಲ್ಕನೇ ಶನಿವಾರದಂದು ಹೋಬಳಿ ಮಟ್ಟದಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಸೂಕ್ತ ಪರಿಹಾರವನ್ನು ಅವರಿರುವಲ್ಲಿಯೇ ಒದಗಿಸಲಿದ್ದಾರೆ ಎಂದ ಅವರು ಪ್ರತಿ ಬುಧವಾರ ಜಿಲ್ಲಾಧಿಕಾರಿಗಳು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅರ್ಜಿಗಳನ್ನು ಫಾಲೋಆಪ್ ಮಾಡಲಿದ್ದಾರೆ ಎಂದರು.
ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಖಾತೆ ಪೋಡಿ, ದರಕಾಸ್ತು ಜಮೀನು, ಜಮೀನುಗಳಿಗೆ ಕಾಲುದಾರಿ, ಮನೆ, ನಿವೇಶನ, ಚರಂಡಿ ವ್ಯವಸ್ಥೆ ಮಾಡಿ ಕೊಡುವುದು, ಕೆರೆಗಳ ಅಭಿವೃದ್ಧಿ ಕಾರ್ಯ, ಗೃಹಜ್ಯೋತಿ, ಮುಂತಾದ ಸಮಸ್ಯೆಗಳ ಕುರಿತು ವಿವಿಧ ಇಲಾಖೆಗಳಿಂದ 208 ಅರ್ಜಿಗಳು ಸಲ್ಲಿಕೆಯಾಗಿದ್ದು, ಸಚಿವರು ಶಾಂತವಾಗಿ ಜನರ ಸಮಸ್ಯೆಗಳನ್ನು ಆಲಿಸಿ, ಇಲಾಖೆಯ ಅಧಿಕಾರಿಗಳು ಕ್ರಮವಹಿಸಿ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಸೂಚನೆ ನೀಡಿದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಡಿ. ಎಫ್. ಓ ರುಥೇನ್, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಸ್ವಾಗತಿಸಿ, ರೋಷನ್ ಕುಮಾರ್ ಶೆಟ್ಟಿ ನಿರೂಪಿಸಿದರು.

