‘ಮೀಡಿಯಾ ಮನಸುಗಳು’ತಂಡದ ಕಳಕಳಿ : ದೇರೆಬೈಲ್ ಬಸ್ ತಂಗುದಾಣ ಭಾಗಶಃ ಸ್ವಚ್ಛ
ವಾಸ್ತವ ಸ್ಥಿತಿ ವಿಡಿಯೋ ಮೂಲಕ ಜನರ ಮುಂದಿಟ್ಟ ತಂಡ, ಸ್ವಚ್ಛಗೊಳಿಸಿದ ಸ್ಥಳೀಯರು
(Mangaluru) ಮಂಗಳೂರು: ದೇರೆಬೈಲ್ ಚರ್ಚ್ ಬಳಿಯ ಬಸ್ ತಂಗುದಾಣ ಕಸ-ಕಡ್ಡಿಗಳಿಂದ ತುಂಬಿ, ದುರ್ನಾತ ಹಾಗೂ ಅಶುಚಿತ್ವದಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ನಿಲ್ಲಬೇಕಾದ ಸ್ಥಿತಿಯಲ್ಲಿತ್ತು.
ಈ ತಂಗುದಾಣದಲ್ಲಿ ದಿನನಿತ್ಯ ನೂರಾರು ಮಂದಿ ಬಸ್ ಕಾಯುವ ಈ ನಿಲ್ದಾಣದ ದುಸ್ಥಿತಿಯಲ್ಲಿದ್ದು, ‘ಮೀಡಿಯಾ ಮನಸುಗಳುʼ ತಂಡದ ಗಮನ ಸೆಳೆದಿತ್ತು.
ಮನಸ್ಸಿದ್ದರೆ ಕೈಜೋಡಿಸಿ ಮಾಡಬಹುದಾದ ಸಕ್ರಿಯ ಆಂದೋಲನ ಎಂಬುದಕ್ಕೆ ದೇರೆಬೈಲ್ ಚರ್ಚ್ ಬಳಿಯ ಬಸ್ ತಂಗುದಾಣ ಸಾಕ್ಷಿಯಾಗಿದೆ.
ಅಲ್ಲಿನ ವಾಸ್ತವ ಸ್ಥಿತಿಯನ್ನು ವಿಡಿಯೋ ಮೂಲಕ ಜನರ ಮುಂದಿಟ್ಟ ತಂಡ, ಶೀಘ್ರದಲ್ಲೇ ಸ್ವಚ್ಛತಾ ಕಾರ್ಯ ಕೈಗೊಳ್ಳುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿತ್ತು. ಒಂದು ವಿಡಿಯೋ ಕೇವಲ ದೃಶ್ಯವನ್ನಷ್ಟೇ ತೋರಿಸಲಿಲ್ಲ ಬದಲಿಗೆ ಅದು ಜವಾಬ್ದಾರಿಯ ಪ್ರಶ್ನೆಯನ್ನೂ ಸಮಾಜದ ಮುಂದಿಟ್ಟಿತ್ತು.
ಆದರೆ, ತಂಡ ಸ್ವತಃ ಕಾರ್ಯಾಚರಣೆಗೆ ಇಳಿಯುವ ಮುನ್ನವೇ ಅಲ್ಲೊಂದು ಮೌನ ಕ್ರಾಂತಿ ನಡೆದಿದೆ.
‘ಮೀಡಿಯಾ ಮನಸುಗಳು’ತಂಡದ ವಿಡಿಯೋದಿಂದ ಪ್ರೇರಣೆ ಪಡೆದವರು ಬಸ್ ನಿಲ್ದಾಣದ ಭಾಗಶ: ಕಸ ತ್ಯಾಜ್ಯವನ್ನು ತೆರವುಗೊಳಿಸಿದ್ದಾರೆ. ಈ ಪುಟ್ಟ ಕಾರ್ಯವು ದೊಡ್ಡ ಸಾಮಾಜಿಕ ಸಂದೇಶವೊಂದನ್ನು ಸಾರಿದೆ. ಈ ಕಾರ್ಯ ನಿಜಕ್ಕೂ ಅಭಿನಂದನಾರ್ಹವಾಗಿದೆ.
ಇದು ‘ಮೀಡಿಯಾ ಮನಸುಗಳು’ತಂಡದ ಸಾಮಾಜಿಕ ಕಳಕಳಿಗೆ ದೊರೆತ ಮೊದಲ ಪ್ರತಿಫಲವೂ ಹೌದು. ಒಂದು ಸಮಸ್ಯೆಯನ್ನು ಎತ್ತಿ ತೋರಿಸಿದಾಗ, ಅದಕ್ಕೆ ಸಮಾಜದಿಂದಲೇ ಪ್ರತಿಕ್ರಿಯೆ ಮೂಡಬಹುದು ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ.
ಆದರೆ, ಅರ್ಧ ಸ್ವಚ್ಛತೆಯಲ್ಲಿ ಪೂರ್ಣ ಪರಿಹಾರವಿಲ್ಲ. ಜನರು ಆರಂಭಿಸಿದ ಈ ಕಾರ್ಯಕ್ಕೆ ಇದೀಗ ಮಹಾನಗರ ಪಾಲಿಕೆ ಕೈಜೋಡಿಸಬೇಕಿದೆ. ಉಳಿದಿರುವ ಕಸ-ಕಡ್ಡಿಗಳನ್ನು ಸಂಪೂರ್ಣ ತೆರವುಗೊಳಿಸಿ, ತಂಗುದಾಣವನ್ನು ಸ್ವಚ್ಛ ಹಾಗೂ ಪ್ರಯಾಣಿಕ ಸ್ನೇಹಿಯಾಗಿಸುವುದರ ಜೊತೆಗೆ, ಮುಂದೆಯೂ ಅಲ್ಲಿ ಕಸ ಸಂಗ್ರಹವಾಗದಂತೆ ನಿಯಮಿತ ಸ್ವಚ್ಛತಾ ವ್ಯವಸ್ಥೆ ರೂಪಿಸಬೇಕಿದೆ.
ಏಕೆಂದರೆ ಸ್ವಚ್ಛ ಬಸ್ ತಂಗುದಾಣ ಎನ್ನುವುದು ಕೇವಲ ಒಂದು ಸ್ಥಳದ ಸೌಂದರ್ಯವಲ್ಲ, ಅದು ಆ ಸಮಾಜದ ನಾಗರಿಕ ಪ್ರಜ್ಞೆಯ ಪ್ರತಿಬಿಂಬವಾಗಿದೆ.

