ಅಕ್ಟೋಬರ್ 2 – 3 : ಕಾಪು ತಾಲೂಕು ಎಂಟನೇ ಸಾಹಿತ್ಯ ಸಮ್ಮೇಳನ
ಆಮಂತ್ರಣ ಪ್ರತ್ರಿಕೆ ಬಿಡುಗಡೆಗೊಳಿಸಿದ ಕಾಪು ಪುರಸಭಾ ಅಧ್ಯಕ್ಷೆ ಮೋಹಿನಿ ಶೆಟ್ಟಿ
(Kaup) ಕಾಪು: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ೮ನೇ ಸಾಹಿತ್ಯ ಸಮ್ಮೇಳನ ಅಕ್ಟೋಬರ್ 2 ಶುಕ್ರವಾರ ಮತ್ತು ಅ. 3 ಶನಿವಾರ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಜರುಗಲಿದ್ದು, ಗುರುವಾರ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಪುರಸಭಾ ಅಧ್ಯಕ್ಷರಾದ ಮೋಹಿನಿ ಶೆಟ್ಟಿ ಮಲ್ಲಾರುರವರು ಬಿಡುಗೆಗೊಳಿಸಿದರು.
ಅವರು ಮಾತನಾಡಿ, ಕಾಪು ತಾಲೂಕು ಕೇಂದ್ರದಲ್ಲಿ ಪ್ರಥಮವಾಗಿ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ. ಸಮ್ಮೇಳನದ ಯಶಸ್ಸಿಗೆ ಪುರಸಭಾ ವತಿಯಿಂದ ಪೂರ್ಣ ಸಹಕಾರ ನೀಡಲಿದ್ದು, ಎಲ್ಲರೂ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಸರಕಾರ ಎಂಟು ವರ್ಷಗಳ ಹಿಂದೆ ರಾಜ್ಯದಲ್ಲಿ ನೂತನ 49 ಹೊಸ ತಾಲೂಕುಗಳನ್ನು ರಚಿಸಿದ್ದು, ಈ ಹೊಸ ತಾಲೂಕುಗಳಲ್ಲಿ ನಿರಂತರ ಎಂಟು ಸಮ್ಮೇಳನಗಳನ್ನು ನಡೆಸಿದ ಏಕೈಕ ತಾಲೂಕು ಎಂಬ ಗೌರವಕ್ಕೆ ಕಾಪು ತಾಲೂಕು ಘಟಕ ಪಾತ್ರವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಮಾತನಾಡಿ, ಈ ವರೆಗಿನ ಏಳೂ ಸಮ್ಮೇಳನಗಳು ಆಯಾ ಸಮ್ಮೇಳನ ಸ್ವಾಗತ ಸಮಿತಿಯ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿವೆ. ಈ ಸಮ್ಮೇಳನದ ಯಶಸ್ವಿಗೆ ಸ್ವಾಗತ ಸಮಿತಿಯೊಂದಿಗೆ ಪುರಸಭೆ ಹಾಗೂ ಸ್ಥಳೀಯ ಸಾಮಾಜಿಕ, ಧಾರ್ಮಿಕ, ಸಮಾಜಸೇವಾ ಸಂಘಟನೆಗಳು ಪೂರ್ಣ ಪ್ರಮಾಣದಲ್ಲಿ ಸಹರಿಸಿ ಅರ್ಥಪೂರ್ಣವಾಗಿ ನಡೆಸಿಕೊಡುವಂತೆ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಸಾಪ ಜಿಲ್ಲಾ ಪ್ರತಿನಿಧಿಗಳಾದ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ನರಸಿಂಹಮೂರ್ತಿ ಮಣಿಪಾಲ, ಪುರಸಭಾ ಉಪಾಧ್ಯಕ್ಷೆ ಸರಿತಾ, ಪುರಸಭಾ ಸದಸ್ಯರುಗಳಾದ ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್, ಶೈಲೇಶ್ ಅಮೀನ್, ಶಶಿಕಲಾ, ವಾಣಿ ಆಳ್ವ, ದಿನೇಶ್ ಗೊಲ್ಲ, ಕಾಪು ಹೋಬಳಿ ಕಂದಾಯ ಪರಿವೀಕ್ಷಣಾಧಿಕಾರಿ ಶಬ್ಬೀರ್, ಕಸಾಪ ಸಹ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು, ಸದಸ್ಯರುಗಳಾದ ಭಾಸ್ಕರ ಕಾಮತ್ ಕಟಪಾಡಿ, ಮಧುಕರ್ ಎಸ್ ಕಲ್ಯಾ, ಸೌಮ್ಯಾ ರಾಕೇಶ್, ಕಛೇರಿ ಸಿಬ್ಬಂಧಿಗಳು, ಪೌರ ಕಾರ್ಮಿಕರು ಉಪಸ್ಥಿತರಿದ್ದರು.
ಕಸಾಪ ಕಾಪು ಘಟಕದ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಸ್ವಾಗತಿಸಿ, ನಿರೂಪಿಸಿದರು.

