ಉಡುಪಿ – ಉಚ್ಚಿಲ ದಸರಾ 2026: ಅ. 18 ರಂದು ಆಹ್ವಾನಿತ ತಂಡಗಳ ಪುರುಷರ ಹುಲಿ ಕುಣಿತ ಸ್ಪರ್ಧೆ
“ಅಬ್ಬರದ ಪಿಲಿ ಪಂಥ 2026 ಸೀಸನ್ 1” ರ ಪೋಸ್ಟರ್ ಬಿಡುಗಡೆಗೊಳಿಸಿದ ಉದ್ಯಮಿ ಉದ್ಯಮಿ ಯುವರಾಜ್ ಕಿದಿಯೂರು
(Uchila) ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅ. 11ರಿಂದ 21ರವರೆಗೆ ನಡೆಯಲಿರುವ ಐದನೇ ವರ್ಷದ ಉಡುಪಿ – ಉಚ್ಚಿಲ ದಸರಾ ೨೦೨೬ ಉತ್ಸವದ ಪ್ರಯುಕ್ತ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನ ವತಿಯಿಂದ ಅಕ್ಟೋಬರ್ 18 ರಂದು ಪ್ರಥಮ ಬಾರಿಗೆ ಜರಗಲಿರುವ ಆಹ್ವಾನಿತ ತಂಡಗಳ ಪುರುಷರ ಹುಲಿ ಕುಣಿತ ಸ್ಪರ್ಧೆ “ಅಬ್ಬರದ ಪಿಲಿ ಪಂಥ 2026 ಸೀಸನ್ 1” ರ ಪೋಸ್ಟರನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪ್ರಾಂಗಣದಲ್ಲಿ ಶನಿವಾರ ಮಸ್ಕತ್ ಉದ್ಯಮಿ ಯುವರಾಜ್ ಕಿದಿಯೂರು ಬಿಡುಗಡೆಗೊಳಿಸಿದರು.
ದಸರ ಉತ್ಸವದ ಮುಖ್ಯ ವೇದಿಕೆಯಲ್ಲಿ ಅ.18 ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಅಬ್ಬರದ ಪಿಲಿ ಪಂಥ ಜರಗಲಿದೆ.
ಪಿಲಿ ಪಂಥದ ನೇತೃತ್ವ ವಹಿಸಿರುವ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾಸ್ ವಿ ಅಮೀನ್ ಮಾತನಾಡಿ, ಈ ಸ್ಪರ್ಧೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪ್ರತಿಷ್ಠಿತ ಆಹ್ವಾನಿತ 10 ತಂಡಗಳು ಭಾಗವಹಿಸಲಿದೆ. ಪ್ರಥಮ ಬಹುಮಾನವಾಗಿ 3 ಲಕ್ಷ ರೂ. ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 2 ಲಕ್ಷ ರೂ. ಹಾಗೂ ಆಕರ್ಷಕ ಟ್ರೋಫಿ, ತೃತೀಯ ಬಹುಮಾನ 1 ಲಕ್ಷ ರೂ. ನಗದು ಹಾಗೂ ಆಕರ್ಷಕ ಟ್ರೋಪಿ ಇರಲಿದೆ. ಇದಲ್ಲದೆ, 3 ವೈಯಕ್ತಿಕ ವಿಭಾಗಗಳಲ್ಲಿ ತಲಾ 10 ಸಾವಿರ ರೂ. ನಗದು ಬಹುಮಾನವನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ 10 ತಂಡಗಳು ಭಾಗವಹಿಸಲಿದ್ದು, ಪ್ರತಿ ತಂಡಕ್ಕೂ 25 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದರು.
ಈ ಸಂದರ್ಭ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಕೋಟ್ಯಾನ್ ಬೆಳ್ಳಂಪಳ್ಳಿ, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ರಚನ್ ಸಾಲ್ಯಾನ್, ದಿನೇಶ್ ಎರ್ಮಾಳು, ಯಜ್ಞೇಶ್ ಕರ್ಕೇರ, ಮನೋಜ್ ಕಾಂಚನ್, ಸುಧಾಕರ ಸುವರ್ಣ, ಶ್ರೀಮತಿ ಸವಿತಾ ಶರತ್, ಶ್ರೀಮತಿ ಸುಗುಣ ಕರ್ಕೇರ, ಸುಜಿತ್ ಸಾಲಿಯಾನ್ ಮುಲ್ಕಿ, ಕಿರಣ್ ಕುಮಾರ್, ಪವನ್ ಎರ್ಮಾಳು, ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು.

