ಗೌರಿ – ಗಣೇಶ ಹಬ್ಬ – ಅಥಣಿಯಲ್ಲಿ ಪೋಲಿಸ್ ಇಲಾಖೆಯಿಂದ ಶಿಸ್ತಿನ ಪಥ ಸಂಚಲನ
ಸಾರ್ವಜನಿಕರಲ್ಲಿ ಸುರಕ್ಷತೆ ಮತ್ತು ನಂಬಿಕೆಯ ಭರವಸೆಯನ್ನು ಮೂಡಿಸುವ ಪ್ರಯತ್ನ
(Athanai) ಅಥಣಿ: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಬೃಹತ್ ಪಥಸಂಚಲನ ಯಶಸ್ವಿಯಾಗಿ ನಡೆಯಿತು.
ಸ್ಥಳೀಯ ಡಿವೈಎಸ್ಪಿ ಅವರ ಸಮರ್ಥ ನೇತೃತ್ವದಲ್ಲಿ ನಡೆದ ಈ ಪಥಸಂಚಲನವು ಅಥಣಿ ಪಟ್ಟಣದ ಪ್ರಮುಖ ಬೀದಿಗಳು ಮತ್ತು ಆಯಕಟ್ಟಿನ ರಸ್ತೆಗಳಲ್ಲಿ ಸಾಗಿತು.
ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರಲ್ಲಿ ಸುರಕ್ಷತೆ ಮತ್ತು ನಂಬಿಕೆಯ ಭರವಸೆಯನ್ನು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಸುರಕ್ಷತಾ ಭರವಸೆ: ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿಯ ಶಿಸ್ತಿನ ಪಥ ಸಂಚಲನವು ಜನಸಾಮಾನ್ಯರಲ್ಲಿ ಭಯಮುಕ್ತ ವಾತಾವರಣವನ್ನು ನಿರ್ಮಿಸಿತು.
ಕಟ್ಟುನಿಟ್ಟಿನ ನಿಗಾ:
ಹಬ್ಬದ ಆಚರಣೆಯ ವೇಳೆ ಶಾಂತಿ-ಸೌಹಾರ್ದತೆ ಕಾಯ್ದುಕೊಳ್ಳಲು ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಇಲಾಖೆ ಸಂಪೂರ್ಣ ಸನ್ನದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಾರ್ವಜನಿಕರಿಗೆ ಮನವಿ:
ಸಾರ್ವಜನಿಕರು ಹಾಗೂ ಗಣೇಶ ಮಂಡಳಿಯವರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ಹಬ್ಬವನ್ನು ಅತ್ಯಂತ ಸಂಭ್ರಮ ಹಾಗೂ ಶಾಂತಿಯುತವಾಗಿ ಆಚರಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
ಪೋಲಿಸ್ ಇಲಾಖೆಯ ಈ ಮುಂಜಾಗ್ರತಾ ಕ್ರಮಕ್ಕೆ ಅಥಣಿ ಪಟ್ಟಣದ ನಾಗರಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ: ಮಹೇಶ್ ಶರ್ಮಾ

