ಅ.25 : ತುಳುನಾಡಿನ ಗರೋಡಿಗಳ ಪೂ ಪೂಜನೆಯವರು, ದರ್ಶನ ಪೂಜಾರಿ, ಕೂಡುಕಟ್ಟಿನ ಗುರಿಕಾರರ ಸಮ್ಮೇಳನ
ಮಾಹಿತಿ ನೀಡಿದ ಅಧ್ಯಯನ ಕೇಂದ್ರದ ಗೌರವ ಸಲಹೆಗಾರ ಮಾಜಿ ಸಚಿವ ವಿನಯ ಕುಮಾರ್ ಸೊರಕೆ
(Kaup) ಕಾಪು : ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಬೈದಶ್ರೀ ಸಂಸ್ಥೆ ವತಿಯಿಂದ ಕಾಪು ತಾಲೂಕಿನ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಗಳ ಪೂ- ಪೂಜನೆಯವರು, ಬೈದರ ದರ್ಶನ ಪೂಜಾರಿಗಳು ಹಾಗೂ ಕೂಡುಕಟ್ಟಿನ ಗುರಿಕಾರರ ಸಮ್ಮೇಳನ ಮತ್ತು ಸಮಾಲೋಚನೆಯನ್ನು ಅ.25, ರವಿವಾರ ಬೆಳಿಗ್ಗೆ 10 ಗಂಟೆಗೆ ಕಟಪಾಡಿಯ ಶ್ರೀ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಯನ ಕೇಂದ್ರದ ಗೌರವ ಸಲಹೆಗಾರರಾದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಸೋಮವಾರ ಕಾಪು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಸೂರ್ಯೋದಯ ಪೆರಂಪಳ್ಳಿ ಮಾತನಾಡಿ, ತಾಲೂಕುವಾರು ಶ್ರೀ ಬ್ರಹ್ಮ ಬೈದರ್ಕಳ ಗರೋಡಿಗಳ ಪೂಪೂಜನೆಯವರು, ಬೈದರ ದರ್ಶನ ಪೂಜಾರಿಗಳು ಹಾಗೂ ಕೂಡುಕಟ್ಟಿನ ಗುರಿಕಾರರನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ. ತದನಂತರ ತುಳುನಾಡಿನ ಎಲ್ಲ ಗರೋಡಿಗಳ ಪ್ರತಿನಿಧಿಗಳನ್ನು ಒಟ್ಟು ಸೇರಿಸುವ ಬೃಹತ್ ಸಮ್ಮೇಳನವನ್ನು ಆಯೋಜಿಸುವ ಉದ್ದೇಶ ಸಂಸ್ಥೆಗಿದೆ.
ಕಾರ್ಯಕ್ರಮದಲ್ಲಿ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಡಾ. ತುಕಾರಾಮ್ ಪೂಜಾರಿ ದಿಕ್ಸೂಚಿ ಭಾಷಣವನ್ನುಮಾಡಲಿದ್ದಾರೆ. ಕಳೆದ 4 ದಶಕಗಳಿಂದ ಕರಾವಳಿ ಕರ್ನಾಟಕದ ಸಂಸ್ಕೃತಿ, ಪರಂಪರೆ, ಕಟ್ಟುಕಟ್ಟಳೆ, ಪಾರ್ದನಗಳು ಹಾಗೂ ತುಳುನಾಡಿನ ಜನಪದೀಯ ಆಚರಣೆಗಳ ಅಧ್ಯಯನ ಹಾಗೂ ಮಾಹಿತಿಗಳನ್ನು ಗ್ರಂಥ ರೂಪದಲ್ಲಿ ದಾಖಲಿಸುವ ಕಾರ್ಯ ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದಿಂದ ಆಗಿದೆ. ಈ ಮೂಲಕ ಗರೋಡಿಗಳ ಇತಿಹಾಸ, ಆರಾಧನಾ ಪರಂಪರೆ, ಆಚರಣೆಗಳು ಹಾಗೂ ಮೌಖಿಕವಾಗಿ ಉಳಿದುಬಂದಿರುವ ಅಮೂಲ್ಯ ಸಾಂಸ್ಕೃತಿಕ ಮಾಹಿತಿಗಳನ್ನು ಸಂಗ್ರಹಿಸಿ, ವ್ಯವಸ್ಥಿತವಾಗಿ ದಾಖಲಿಸಿ, ಮುಂದಿನ, ಪೀಳಿಗೆಗೆ ಉಳಿಸುವುದು ಸಂಸ್ಥೆಯ ಮುಖ್ಯ ಆಶಯವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ದಾಮೋದರ ಕಲ್ಮಾಡಿ, ಹರೀಶ್ ಎಮ್.ಕೆ. ಕಲ್ಮಾಡಿ, ಸುಧಾಕರ ಡಿ. ಅಮೀನ್ ಪಾಂಗಾಳ ಉಪಸ್ಥಿತರಿದ್ದರು.

