ಕಾಪು : ಗುರ್ಮೆ ಫೌಂಡೇಶನ್ ನಿಂದ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಸಹೋದರರು ತಮ್ಮ ತಾಯಿ ಹೆಸರಿನಲ್ಲಿ ನಡೆಸಲ್ಪಡುವ ಸಂಸ್ಥೆ
(Kaup) ಕಾಪು : ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕಾಪು ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ಗುರ್ಮೆ ಫೌಂಡೇಶನ್ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮ ಭಾನುವಾರ ಕಾಪುವಿನ ವೀರಭದ್ರ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.
ಅವರು ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ನಾಯಕತ್ವದಲ್ಲಿ ಸೇವಾ ಸಂಕಲ್ಪ ನಡೆಯುತ್ತಿದೆ. ರಾಜಕಾರಣ ವೃತ್ತಿಯಲ್ಲ ಅದು ವೃತ. ರಾಜಕಾರಣವನ್ನು ಸೇವೆಯಂತೆ ಸ್ವೀಕರಿಸಿ, ಕುಟುಂಬ ರಾಜಕಾರಣದ ಮಧ್ಯೆ ದೇಶಕ್ಕೋಸ್ಕರ ರಾಜಕಾರಣ ಮಾಡುತ್ತಿರುವ ವ್ಯಕ್ತಿ ನರೇಂದ್ರ ಮೋದಿ ಎಂದು ಉಡುಪಿ ಚಿಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕರ್ನಾಟಕದಲ್ಲಿ 70 ಸಾವಿರ ಅಂಗನವಾಡಿಗಳಲ್ಲಿ ಒಟ್ಟು 1 ಲಕ್ಷ 30 ಸಾವಿರ ಸಿಬ್ಬಂದಿಗಳಿದ್ದಾರೆ. 32 ಲಕ್ಷ ಮಕ್ಕಳನ್ನು ತಮ್ಮ ಮಕ್ಕಳಂತೆ ಆರೈಕೆ ಮಾಡುವ ಅಂಗನವಾಡಿ ಶಿಕ್ಷಕಿಯರಿದ್ದಾರೆ. ಇದರ ಜೊತೆಗೆ ಕೊರೋನಾದಂತಹ ಸಂದರ್ಭ ತಮ್ಮ ಆರೋಗ್ಯವನ್ನು ಬದಿಗಿಟ್ಟು ಸಾರ್ವಜನಿಕ ಸೇವೆಯಲ್ಲಿ ನಿರತರಾದ ಆಶಾ ಕಾರ್ಯಕರ್ತೆಯರ ಸೇವೆ ಮರೆಯಲಾಗದು ಎಂದ ಅವರು, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಗುರ್ಮೆ ಫೌಂಡೇಷನ್ ಅದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಹಸಿವು ಆವಮಾನ ಉಂಡ ನಾನು ನಮ್ಮ ಕುಟುಂಬದ ಗುರ್ಮೆ ಫೌಂಡೇಶನ್ ಹೆಸರಿನಲ್ಲಿ ಈ ಬಾರಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸೇವೆ ಸ್ಮರಿಸಲು ಸಂಕಲ್ಪಿಸಿದ್ದೇವೆ. ನಾನು ರಾಜಕಾರಣ ಮಾಡುತ್ತಿಲ್ಲ. ಸಮಾಜ ಸೇವೆಯಿಂದ ತೃಪ್ತಿಯಿದೆ. ಪ್ರೀತಿಯಿಂದ ಗೆಲ್ಲಿಸಿದ್ದೀರಿ. ಧರ್ಮ ಕರ್ಮ ಸಿದ್ಧಾಂತದಲ್ಲಿ ಇನ್ನು ಮುಂದೆಯೂ ಸಮಾಜದ ಸೇವೆ ಮಾಡಲು ಸಿದ್ಧನಿದ್ದೇನೆ ಎಂದರು.
ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು.
ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಕಾಪು ಮಂಡಲ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಮಾಜಿ ಜಿ. ಪಂ. ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಗುರುರಾಜ್, ಯುವ ಮೋರ್ಚಾ ಅಧ್ಯಕ್ಷ ಸೋನು ಪಾಂಗಾಳ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ನಜೀರ್ ಶೇಖ್, ಕಾಪು ಪುರಸಭಾ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಉಪಾಧ್ಯಕ್ಷೆ ಸರಿತಾ ಶಿವಾನಂದ್ ಉಪಸ್ಥಿತರಿದ್ದರು.
ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಸ್ವಾಗತಿಸಿದರು. ಮಂಡಲ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ನಿರೂಪಿಸಿದರು.
ಈ ಸಂದರ್ಭ ಕಾಪು ತಾಲೂಕಿನ ಸುಮಾರು 600 ಮಂದಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು.

