ಶಿಕ್ಷಣ ಸಿಗುವುದು ಮುಖ್ಯ ಸರ್ಟಿಫಿಕೇಟು ಅಲ್ಲ : ಗುರುರಾಜ ಕರ್ಜಗಿ
ಕಟೀಲಿನಲ್ಲಿ ನುಡಿಹಬ್ಬ ಭ್ರಮರ ಇಂಚರದ ಎರಡನೆ ದಿನದ ಗೋಷ್ಟಿ
(Kateel) ಕಟೀಲು : ದುಡ್ಡಾಗುತ್ತದೆ ಎಂದು ಡಾಕ್ಟರಾಗುವುದು ಮುಖ್ಯ ಅಲ್ಲ. ಹಣಕ್ಕಾಗಿ ಶಿಕ್ಷಣ ಮಾಡುವುದಲ್ಲ. ಶಿಕ್ಷಣ ಸಿಗುವುದು ಮುಖ್ಯ. ಸರ್ಟಿಫಿಕೇಟು ಅಲ್ಲ ಎಂದು ಖ್ಯಾತ ಚಿಂತಕ ಡಾ. ಗುರುರಾಜ ಕರ್ಜಗಿ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ನಡೆಯುತ್ತಿರುವ ನುಡಿಹಬ್ಬ ಭ್ರಮರ ಇಂಚರದ ಎರಡನೆ ದಿನದ ಗೋಷ್ಟಿಯಲ್ಲಿ ಶಿಕ್ಷಣವೆಂದರೆ ಇಷ್ಟೇ ಅಲ್ಲ ಎನ್ನುವ ಕುರಿತು ಮಾತನಾಡಿದರು.
ಹತ್ತಿ ಪ್ರಕೃತಿ. ಬಟ್ಟೆ ಸಂಸ್ಕೃತಿ. ಗಂಟಲು ಎಲ್ಲರಿಗೂ ಇದೆ. ಸಂಗೀತ ಸಂಸ್ಕೃತಿ, ಕಾಲು ಪ್ರಕೃತಿ, ನೃತ್ಯ ಸಂಸ್ಕೃತಿ. ಶಕ್ತಿಯಿಂದ ಯುಕ್ತಿಯಿಂದ ಪರಿಶ್ರಮದಿಂದ ಮಾಡಿದಾಗ ಪ್ರಕೃತಿ ಸಂಸ್ಕೃತಿಯಾಗುತ್ತದೆ. ಸಂಸ್ಕೃತಿ ಆಗಬಹುದಾದ ಪ್ರಕೃತಿ ಕಲ್ಲು ರಸ್ತೆಯ ಜಲ್ಲಿಕಲ್ಲು ಆದರೆ ವಿಕೃತಿಯಾಗುತ್ತದೆ. ಹಾಗೆಯೇ ಸಂಸ್ಕಾರಗಳಿಂದ ಸುಸಂಕೃತ ವ್ಯಕ್ತಿಯಾಗುತ್ತಾನೆ. ಅಣೆಕಟ್ಟಿನ ನೀರು ಹೋದಂತೆ ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗಬೇಕು. ನಾವು ಪ್ರತಿಯೊಬ್ಬರೂ ಒಂದೊಂದು ವ್ಯಕ್ತಿತ್ವದಿಂದ ಅದ್ಭುತವೇ.
ಶಿಕ್ಷಣ ತನ್ನ ಬಗ್ಗೆ ಪ್ರೀತಿ, ಭಾಷೆ ಬಗ್ಗೆ ಪ್ರೀತಿ, ನಮ್ಮ ದೇಶದ ಬಗ್ಗೆ ಪ್ರೀತಿ ಹುಟ್ಟಿಸಬೇಕು. ಈಗಿನ ಶಿಕ್ಷಣದ ಕ್ರಮ ಬದಲಾಗಬೇಕು. ಮೌಲ್ಯಗಳನ್ನು ಕಲಿಸಬೇಕು. ಹೇಳುವವ ಪ್ರಾಮಾಣಿಕವಾಗಿದ್ದರೆ ಕೇಳುವವನೂ ಪ್ರಾಮಾಣಿಕವಾಗಿರುತ್ತಾನೆ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಡಾ. ಜನಾರ್ದನ ಭಟ್, ಕಟೀಲು ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳಾದ ಸಚಿನ್ ಅಡಪ, ಡಾ. ಮೋಹನ್ ಭಟ್, ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.

