ಕಲ್ಯಾಣಪುರ: ಪ್ಲಾನೆಟ್ ಮಾರ್ಸ್ ಫೌಂಡೇಶನ್‌ನ ದಶಮಾನೋತ್ಸವ ಸಂಭ್ರಮ
ಕಾರ್ಯಕ್ರಮ ಉದ್ಘಾಟಿಸಿದ ಶ್ರೀಮತಿ ವೆರೋನಿಕಾ ಕಾರ್ನೇಲಿಯಾ
(Kalyanapura) ಕಲ್ಯಾಣಪುರ: ಪ್ಲಾನೆಟ್ ಮಾರ್ಸ್ ಫೌಂಡೇಶನ್ (ರಿ.), ಕಲ್ಯಾಣಪುರ, ಉಡುಪಿ ಸಂಸ್ಥೆಯ ದಶಮಾನೋತ್ಸವ ವಿಜೃಂಭಣೆಯಿಂದ ನಡೆಯಿತು.
ಶ್ರೀಮತಿ ವೆರೋನಿಕಾ ಕಾರ್ನೇಲಿಯಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಬಿ.ಕೆ. ನಾರಾಯಣ ಅವರು ವಹಿಸಿದ್ದರು.
ಸಂಸ್ಥೆಯ ಹತ್ತು ವರ್ಷಗಳ ಸೇವಾ ಪಯಣ ಹಾಗೂ ಸಾಧನೆಗಳನ್ನು ಒಳಗೊಂಡ ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು.
ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ದೀಪ್ತಿ ಸಚಿನ್ ಸುವರ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಆಶ್ರಯ, ಶಿಕ್ಷಣ ಮತ್ತು ಉತ್ತಮ ಭವಿಷ್ಯ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ನಡೆದುಬಂದ ಹಾದಿಯನ್ನು ವಿವರಿಸಿದರು.
ಅತಿಥಿಗಳು ಸಂಸ್ಥೆಯ ಸೇವಾ ಕಾರ್ಯಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.
ವಿದ್ಯಾರ್ಥಿನಿಯರಾದ ಕಾವೇರಿ ಮತ್ತು ಮಂಗಲ್ ಅವರು ಸಂಸ್ಥೆಯಿಂದ ದೊರೆತ ಪ್ರೀತಿ, ಶಿಕ್ಷಣ ಹಾಗೂ ಪ್ರೋತ್ಸಾಹದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಂಸ್ಥೆಯ ಸ್ಥಾಪಕರಾದ ರಕ್ಷಾರವರ ಅಜ್ಜಿ ರಾಧಾ ಬಾಬು ಕೋಟ್ಯಾನ್, ಸಂಸ್ಥೆಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಕರಾಟೆ ಶಿಕ್ಷಕ ರೋಹಿತ್, ವಿಜಯಕುಮಾರ್ ಸರಸ್ವತಿ ಆರ್ಟ್ಸ್, ನಾಟಕ ತರಬೇತುದಾರ ಯೋಗೀಶ್, ಸುಮನಸ ಕೊಡವೂರು ಹಾಗೂ ಬಂಜಾರಾ ನೃತ್ಯ ತರಬೇತುದಾರ ಡಾ. ಸದಾನಂದ ಕುಂದರ್ ಅವರನ್ನು ಗೌರವಿಸಲಾಯಿತು.
ವಿದ್ಯಾರ್ಥಿನಿಯರು ಹಾಗೂ ಹಳೆಯ ವಿದ್ಯಾರ್ಥಿನಿಯರಿಂದ ಭರತನಾಟ್ಯ, ಬಂಜಾರಾ ನೃತ್ಯ, ಗರ್ಭಾ ನೃತ್ಯ, ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
‘ಈ ಬದುಕು’ ಎಂಬ ಕಿರು ನಾಟಕವು ವಿಶೇಷ ಆಕರ್ಷಣೆಯಾಗಿತ್ತು.
ಮುಖ್ಯ ಅತಿಥಿಗಳಾಗಿ ಉಡುಪಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಅಡ್ವೊಕೇಟ್ ಶ್ರೀಮತಿ ಜೂಹಿ ದಾಮೋದರ್, ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ರಾಘವೇಂದ್ರ ಸಿ., ಜಿಲ್ಲಾ ಬಾಲ ನ್ಯಾಯ ಮಂಡಳಿಯ ಸದಸ್ಯರಾದ ಸಿಸ್ಟರ್ ಲಿಲ್ಲಿ ಪುಷ್ಪ ಹಾಗೂ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ದೀಪ್ತಿ ಸಚಿನ್ ಸುವರ್ಣ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಹರೀಶ್ ಕೋಟ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ರೋಸ್ಲಿಂಗ್ ಕ್ರಾಸ್ತ ವಂದಿಸಿದರು.

