ಅಥಣಿ : ನ್ಯಾಯಾಲಯದ ಆದೇಶವಿದ್ದರೂ ಕಂದಾಯ ಇಲಾಖೆಯ ನಿರ್ಲಕ್ಷ್ಯ
ಪೋಡಿ ಮಾಡದೆ 11E ಸ್ಕೆಚ್ ನೀಡದ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ
(Athani) ಅಥಣಿ: ತಂದೆಯ ಆಸ್ತಿಯಲ್ಲಿ ಕಾನೂನುಬದ್ಧವಾಗಿ ಬರಬೇಕಾದ ಪಾಲಿಗಾಗಿ ಸುದೀರ್ಘ ಕಾನೂನು ಹೋರಾಟ ನಡೆಸಿ, ನ್ಯಾಯಾಲಯದಿಂದ ಅಂತಿಮ ಆದೇಶ ಹಾಗೂ ಜಮೀನಿನ ಕಬ್ಜಾ ಪಡೆದುಕೊಂಡಿದ್ದರೂ, ಕಂದಾಯ ದಾಖಲೆಗಳಲ್ಲಿ ಹೆಸರು ದಾಖಲಿಸಲು ಕಂದಾಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು SC/ST ಮಹಿಳಾ ಸಬಲೀಕರಣ ಹೋರಾಟ ಸಮಿತಿ ಅಥಣಿ ಇದರ ರಾಜ್ಯ ಮಾಧ್ಯಮ ವಕ್ತಾರ ಮಹೇಶ್ ಎಮ್. ಶರ್ಮಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಸಮಸ್ಯೆ ಹಾಗೂ ಅಧಿಕಾರಿಗಳ ಗೊಂದಲದ ಧೋರಣೆ:
1. ಪೋಡಿ ಮತ್ತು 11E ಸ್ಕೆಚ್ ನಡುವಿನ ಇಲಾಖಾ ಗೊಂದಲ:
ಜಮೀನಿನ ವಿಸ್ತೀರ್ಣದಲ್ಲಿನ ವ್ಯತ್ಯಾಸವನ್ನು ಸರಿಪಡಿಸಲು ತೆಲಸಂಗ ನೆಮ್ಮದಿ ಕೇಂದ್ರದಲ್ಲಿ ಪೋಡಿಗಾಗಿ ಅರ್ಜಿ ಸಲ್ಲಿಸಲು ಹೋದರೆ, ಅಧಿಕಾರಿಗಳು ಮೊದಲು ಪೋಡಿ ಪ್ರಕ್ರಿಯೆ ಮುಗಿಯದೆ ’11E ಸ್ಕೆಚ್’ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಇನ್ನೊಂದೆಡೆ ಮೊದಲು 11E ಸ್ಕೆಚ್ ತೆಗೆದುಕೊಂಡು ಬನ್ನಿ ಎಂದು ಸಬೂಬು ಹೇಳಿ ಬಡ ಅರ್ಜಿದಾರರನ್ನು ಅಲೆದಾಡಿಸುತ್ತಿದ್ದಾರೆ.
2. ಕ್ರಮಬದ್ಧವಲ್ಲದ ನಿಬಂಧನೆಗಳು:
ನ್ಯಾಯಾಲಯದ ಡಿಗ್ರಿ ಹಾಗೂ ಕಬ್ಜಾ ಆದೇಶವಿದ್ದಾಗ ಕಂದಾಯ ಮತ್ತು ಭೂಮಾಪನ ಇಲಾಖೆಯೇ ಜವಾಬ್ದಾರಿ ವಹಿಸಿಕೊಂಡು ತಾಂತ್ರಿಕ ದೋಷಗಳನ್ನು ನಿವಾರಿಸಿ ದಾಖಲೆಗಳನ್ನು ತಿದ್ದುಪಡಿ ಮಾಡಬೇಕು. ಆದರೆ, ಈ ನಿಯಮಗಳನ್ನು ಗಾಳಿಗೆ ತೂರಿ, ಕಚೇರಿಯಿಂದ ಕಚೇರಿಗೆ ಅಲೆದಾಡಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಗೆ ಮತ್ತು ಸಂತ್ರಸ್ತ ಮಹಿಳೆಗೆ ದೊರೆಯಬೇಕಾದ ನ್ಯಾಯಕ್ಕೆ ಅಡ್ಡಿಪಡಿಸಲಾಗುತ್ತಿದೆ.
3. ಉತಾರದಲ್ಲಿ ಹೆಸರು ಬರುವುದು ಯಾವಾಗ?:
ಪೋಡಿ ಮಾಡದೆ 11E ಸ್ಕೆಚ್ ಸಿಗುವುದಿಲ್ಲ, ಸ್ಕೆಚ್ ಇಲ್ಲದೆ ಮ್ಯುಟೇಶನ್ ಆಗುವುದಿಲ್ಲ ಎನ್ನುವ ಅಧಿಕಾರಿಗಳ ಈ ವಿಳಂಬ ನೀತಿಯಿಂದಾಗಿ, ನ್ಯಾಯಾಲಯದಲ್ಲಿ ಗೆದ್ದು ಆದೇಶ ತಂದರೂ ಸಂತ್ರಸ್ತ ಮಹಿಳೆಗೆ ಉತಾರದಲ್ಲಿ ಹೆಸರು ಸಿಗದೆ ವಂಚಿತಳಾಗುವಂತಾಗಿದೆ.
ಸ್ವಯಂ ಪ್ರೇರಿತ ತಿದ್ದುಪಡಿ ಹಾಗೂ ಆದೇಶ ಅನುಷ್ಠಾನ:
ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ಮತ್ತು ಅಥಣಿ ತಹಶೀಲ್ದಾರರು ತಕ್ಷಣವೇ ಮಧ್ಯ ಪ್ರವೇಶಿಸಿ, ನ್ಯಾಯಾಲಯದ ಆದೇಶವನ್ನು ಆಧರಿಸಿ ಯಾವುದೇ ವಿಳಂಬವಿಲ್ಲದೆ ತಕ್ಷಣವೇ RTC ಯಲ್ಲಿ ಸಂತ್ರಸ್ತ ಮಹಿಳೆಯ ಹೆಸರನ್ನು ದಾಖಲಿಸಬೇಕು.
ಇಲಾಖಾ ಹಂತದಲ್ಲೇ ಫೋಡಿ ಪ್ರಕ್ರಿಯೆ ಪೂರ್ಣಗೊಳ್ಳಲಿ: ಸರ್ವೇ ಹಾಗೂ ಫೋಡಿ ದೋಷವಿದ್ದರೆ ಸಾರ್ವಜನಿಕರನ್ನು ಅಲೆಸದೆ, ಕಂದಾಯ ಮತ್ತು ಭೂಮಾಪನ ಇಲಾಖೆಯೇ ನೇರವಾಗಿ ಜವಾಬ್ದಾರಿ ತೆಗೆದುಕೊಂಡು ತಾಂತ್ರಿಕ ತೊಂದರೆಗಳನ್ನು ಶೀಘ್ರವಾಗಿ ನಿವಾರಿಸಬೇಕು ಎಂದು ಎಂದು ಮಹೇಶ್ ಎಮ್. ಶರ್ಮಾ ಆಗ್ರಹಿಸಿದ್ದಾರೆ.

