• Home  
  • ಜಿಪಿಎಸ್ (GPS) ಹೇಗೆ ವೇಗವಾದ ಮಾರ್ಗವನ್ನು ಕಂಡು ಹಿಡಿಯುತ್ತದೆ? (How does GPS find the fastest route?)
- SPECIAL STORY

ಜಿಪಿಎಸ್ (GPS) ಹೇಗೆ ವೇಗವಾದ ಮಾರ್ಗವನ್ನು ಕಂಡು ಹಿಡಿಯುತ್ತದೆ? (How does GPS find the fastest route?)

Share:  ಜಿಪಿಎಸ್ (GPS) ಹೇಗೆ ವೇಗವಾದ ಮಾರ್ಗವನ್ನು ಕಂಡುಹಿಡಿಯುತ್ತದೆ?    ಬಂಟಕಲ್ ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕಿ ಡಾ. ತೇಜಸ್ವಿನಿ ಎಚ್.ಅವರ ಲೇಖನ  (Udupi) ಉಡುಪಿ: ಹೊಸ ಊರಿಗೆ ಹೋಗಬೇಕಾದಾಗ ಅಥವಾ ಅಪರಿಚಿತ ಸ್ಥಳವನ್ನು ಹುಡುಕಬೇಕಾದಾಗ ನಾವು ಮೊದಲು ಮೊಬೈಲ್‌ನಲ್ಲಿ ಗೂಗಲ್‌ ಆಪ್‌ ತೆರೆಯುತ್ತೇವೆ. ಗಮ್ಯ  ಸ್ಥಾನವನ್ನು ನಮೂದಿಸಿದ ಕೆಲವೇ ಕ್ಷಣಗಳಲ್ಲಿ ಅದು, “42 ನಿಮಿಷಗಳಲ್ಲಿ ತಲುಪಬಹುದು” ಅಥವಾ “ಇದು ಅತ್ಯಂತ ವೇಗವಾದ ಮಾರ್ಗ” ಎಂದು ತಿಳಿಸುತ್ತದೆ. ಆದರೆ ನಮ್ಮ ಮೊಬೈಲ್‌ಗೆ ಇಷ್ಟೊಂದು ನಿಖರವಾಗಿ ಹೇಗೆ ಗೊತ್ತಾಗುತ್ತದೆ? ಸಾವಿರಾರು […]

  ಇದರ ಹಿಂದಿರುವ ತಂತ್ರಜ್ಞಾನವೇ ಜಾಗತಿಕ ಸ್ಥಾನ ನಿರ್ಣಯ ವ್ಯವಸ್ಥೆ (Global Positioning System – GPS) ಮತ್ತು ಅತ್ಯಾಧುನಿಕ ಕಂಪ್ಯೂಟರ್‌ ವಿಜ್ಞಾನ ಜಿಪಿಎಸ್ ಎಂದರೆ ಭೂಮಿಯ ಸುತ್ತ ಸುಮಾರು 20,000 ಕಿಲೋ ಮೀಟರ್‌ ಎತ್ತರದಲ್ಲಿ ಸುತ್ತುತ್ತಿರುವ ಉಪಗ್ರಹಗಳ ಜಾಲ.

  ಈ ಉಪಗ್ರಹಗಳು ನಿರಂತರವಾಗಿ ತಮ್ಮ ನಿಖರವಾದ ಸ್ಥಾನ ಮತ್ತು ಸಂಕೇತ ಕಳುಹಿಸಿದ ಸಮಯದ ಮಾಹಿತಿಯನ್ನು ಭೂಮಿಗೆ ರವಾನಿಸುತ್ತವೆ. ನಮ್ಮ ಮೊಬೈಲ್ ಅಥವಾ ವಾಹನದಲ್ಲಿರುವ ಜಿಪಿಸ್‌ ವಾಹಕ  (GPS Receiver) ಕನಿಷ್ಠ ನಾಲ್ಕು ಉಪಗ್ರಹಗಳಿಂದ ಈ ಸಂಕೇತಗಳನ್ನು ಸ್ವೀಕರಿಸುತ್ತದೆ. ಸಂಕೇತಗಳು ಮೊಬೈಲ್‌ಗೆ ತಲುಪಲು ತೆಗೆದುಕೊಂಡ ಸಮಯವನ್ನು ಅಳೆಯುವ ಮೂಲಕ, ಪ್ರತಿಯೊಂದು ಉಪಗ್ರಹದಿಂದ ತನ್ನ ಅಂತರವನ್ನು ಲೆಕ್ಕ ಹಾಕುತ್ತದೆ. ನಂತರ ಟ್ರೈಲ್ಯಾಟರೇಷನ್ (Trilateration) ಎಂಬ ಗಣಿತ ವಿಧಾನವನ್ನು ಬಳಸಿಕೊಂಡು ಭೂಮಿಯ ಮೇಲಿನ ತನ್ನ ನಿಖರವಾದ ಸ್ಥಾನವನ್ನು ಕಂಡುಹಿಡಿಯುತ್ತದೆ.

  ಈ ಸ್ಥಾನವನ್ನು ಡಿಜಿಟಲ್‌ ಕಕ್ಷೆಯೊಂದಿಗೆ ಹೊಂದಿಸಿ, ನೀವು ಯಾವ ರಸ್ತೆಯಲ್ಲಿದ್ದೀರಿ. ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೀರಿ ಎಂಬುದನ್ನು ಗುರುತಿಸಲಾಗುತ್ತದೆ. ನೀವು ಚಲಿಸುತ್ತಿರುವಾಗಲೂ ಮೊಬೈಲ್‌ ನ ಕೆಲವು ಕ್ಷಣಗಳಿಗೊಮ್ಮೆ ಹೊಸ ಉಪಗ್ರಹ ಸಂಕೇತಗಳನ್ನು ಸ್ವೀಕರಿಸಿ ತನ್ನ ಸ್ಥಾನವನ್ನು ನವೀಕರಿಸುತ್ತಿರುತ್ತದೆ. ಆದ್ದರಿಂದಲೇ ನಿಮ್ಮ ನಕ್ಷೆಯಲ್ಲಿರುವ ನೀಲಿ ಬಿಂದು ನಿಮ್ಮೊಂದಿಗೆ ನಿರಂತರವಾಗಿ ಚಲಿಸುತ್ತಿರುವಂತೆ ಕಾಣುತ್ತದೆ. ಆದರೆ ನಿಮ್ಮ ಸ್ಥಳವನ್ನು ತಿಳಿದುಕೊಳ್ಳುವುದೇ ಸಾಕಾಗುವುದಿಲ್ಲ. ನಿಜವಾದ ಬುದ್ಧಿವಂತಿಕೆ ನ್ಯಾವಿಗೇಶನ್ ಅಪ್ಲಿಕೇಶನ್‌ನಲ್ಲಿದೆ.

  ಒಂದು ನಗರದ ಎಲ್ಲಾ ರಸ್ತೆಗಳನ್ನು ಜೇಡರ ಜಾಲದಂತೆ ಕಲ್ಪಿಸಿಕೊಳ್ಳಿ. ಒಂದೇ ಗಮ್ಯ ಸ್ಥಾನಕ್ಕೆ ತಲುಪಲು ಹಲವಾರು ರಸ್ತೆಗಳಿರುತ್ತವೆ. ಈ ಎಲ್ಲ ಮಾರ್ಗಗಳನ್ನು ಜಿಪಿ ಎಸ್‌ ಕೆಲವೇ ಕ್ಷಣಗಳಲ್ಲಿ ಪರಿಶೀಲಿಸಿ, ಯಾವ ಮಾರ್ಗದಲ್ಲಿ ಕಡಿಮೆ ಸಮಯದಲ್ಲಿ ತಲುಪಬಹುದು ಎಂಬುದನ್ನು ಲೆಕ್ಕಹಾಕುತ್ತದೆ. ಆದರೆ ಅದು ಕೇವಲ ಕಡಿಮೆ ದೂರದ ರಸ್ತೆಯನ್ನು ಆಯ್ಕೆ ಮಾಡುವುದಿಲ್ಲ. ಬದಲಿಗೆ ಕಡಿಮೆ ಸಮಯದಲ್ಲಿ ಗಮ್ಯ ಸ್ಥಾನ ತಲುಪುವ ಮಾರ್ಗವನ್ನೇ ಆಯ್ಕೆ ಮಾಡುತ್ತದೆ.

  ಇದಕ್ಕಾಗಿ ಅದು ಹಲವು ಅಂಶಗಳನ್ನು ಪರಿಗಣಿಸುತ್ತದೆ:

* ಪ್ರಸ್ತುತ ವಾಹನ ದಟ್ಟಣೆ (Traffic), * ರಸ್ತೆ ಕಾಮಗಾರಿ ಅಥವಾ ರಸ್ತೆ ಬಂದ್ ಆಗಿರುವ ಮಾಹಿತಿ, * ಅಪಘಾತಗಳಿಂದ ಉಂಟಾದ ಸಂಚಾರ ಅಡಚಣೆ, * ವಿವಿಧ ರಸ್ತೆಗಳ ವೇಗಮಿತಿ, * ಏಕ ಮುಖ ರಸ್ತೆಗಳು (One-way), * ಟ್ರಾಫಿಕ್‌ ಸಿಗ್ನಲ್‌ಗಳು ಮತ್ತು ಪ್ರಮುಖ ಜಂಕ್ಷನ್‌ಗಳು, * ಟೋಲ್‌ ರಸ್ತೆಗಳು (ಬಳಸಬೇಕೇ ಅಥವಾ ಬೇಡವೇ ಎಂಬ ಆಯ್ಕೆ), * ಅದೇ ರಸ್ತೆಯಲ್ಲಿ ಸಂಚರಿಸುತ್ತಿರುವ ಸಾವಿರಾರು ವಾಹನಗಳಿಂದ ದೊರೆಯುವ ನೈಜ ಸಮಯದ ಮಾಹಿತಿ.

 ಉದಾಹರಣೆಗೆ, ನಿಮ್ಮ ಗಮ್ಯ ಸ್ಥಾನಕ್ಕೆ ಎರಡು ಮಾರ್ಗಗಳಿವೆ ಎಂದುಭಾವಿಸೋಣ. ಒಂದು ಮಾರ್ಗ ಕೇವಲ 10 ಕಿಲೋ ಮೀಟರ್‌ ಇದ್ದರೂ, ಅಲ್ಲಿ ಭಾರೀ ವಾಹನ ದಟ್ಟಣೆ ಇದೆ. ಮತ್ತೊಂದು ಮಾರ್ಗ 14 ಕಿಲೋ ಮೀಟರ್‌ ಇದ್ದರೂ, ವಾಹನ ಸಂಚಾರ ಸುಗಮವಾಗಿದೆ. ಈ ಸಂದರ್ಭದಲ್ಲಿ ಎರಡನೇ ಮಾರ್ಗವೇ ನಿಮ್ಮನ್ನು ಬೇಗ ಗಮ್ಯ ಸ್ಥಾನಕ್ಕೆ ತಲುಪಿಸುತ್ತದೆ. ಆದ್ದರಿಂದ ಗುಲ್‌ ಆಪ್‌ ಕೆಲವೊಮ್ಮೆ ದೂರದ ಮಾರ್ಗವನ್ನೇ ಸೂಚಿಸುತ್ತದೆ.

  ಜಿಪಿಎಸ್‌ ನ ಮತ್ತೊಂದು ವಿಶೇಷತೆ ನೈಜ ಸಮಯದ ಸಂಚಾರ ಮಾಹಿತಿ (Live Traffic Updates).

  ಪ್ರತಿದಿನ ಲಕ್ಷಾಂತರ ಜನರು ಗೂಗಲ್‌ ಆಪ್‌ ಬಳಸುವಾಗ, ಅವರ ಮೊಬೈಲ್‌ಗಳಿಂದ ಅನಾಮಧೇಯವಾಗಿ ವಾಹನಗಳ ಚಲನೆಯ ಮಾಹಿತಿ ಸಂಗ್ರಹವಾಗುತ್ತದೆ. ಒಂದು ರಸ್ತೆಯಲ್ಲಿ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದರೆ, ಆ ರಸ್ತೆಯಲ್ಲಿ ಟ್ರಾಫಿಕ್ ಇದೆ ಎಂದು ವ್ಯವಸ್ಥೆ ಗುರುತಿಸುತ್ತದೆ. ತಕ್ಷಣವೇ ಅದು ಬೇರೆ ವೇಗವಾದ ಮಾರ್ಗವನ್ನು ಸೂಚಿಸುತ್ತದೆ. ಇದೇ ಕಾರಣಕ್ಕೆ ನೀವು ಪ್ರಯಾಣಿಸುತ್ತಿರುವಾಗ ಕೆಲವೊಮ್ಮೆ “ಹೊಸ ವೇಗವಾದ ಮಾರ್ಗ ಲಭ್ಯವಿದೆ” ಎಂಬ ಸಂದೇಶ ಬರುತ್ತದೆ. ಮುಂದೆ ಅಪಘಾತ ಸಂಭವಿಸಿದ್ದರೂ ಅಥವಾ ಟ್ರಾಫಿಕ್‌ ಹೆಚ್ಚಾದರೂ, ಕೆಲವು ಕ್ಷಣಗಳಲ್ಲಿ ಹೊಸ ಮಾರ್ಗವನ್ನು ಲೆಕ್ಕಹಾಕಿ ನಿಮಗೆ ಸೂಚಿಸಲಾಗುತ್ತದೆ.

  ಈ ಎಲ್ಲಾ ನಿರ್ಧಾರಗಳನ್ನು ಪಾತ್-ಫೈಂಡಿಂಗ್ ಅಲ್ಗಾರಿದಮ್‌ಗಳು (Path-Finding Algorithms) ಎಂಬ ವಿಶೇಷ ಗಣಿತ ವಿಧಾನಗಳು ತೆಗೆದುಕೊಳ್ಳುತ್ತವೆ. ಇವು ಸಾವಿರಾರು ಸಾಧ್ಯ ಮಾರ್ಗಗಳನ್ನುಪರಿಶೀಲಿಸಿ, ಪ್ರತಿಯೊಂದು ಮಾರ್ಗದ ದೂರ, ಪ್ರಯಾಣದ ಸಮಯ, ವಾಹನ ದಟ್ಟಣೆ ಮತ್ತು ರಸ್ತೆ ಪರಿಸ್ಥಿತಿಯನ್ನು ಹೋಲಿಕೆ ಮಾಡಿ ಅತ್ಯುತ್ತಮ ಮಾರ್ಗವನ್ನು ಆಯ್ಕೆಮಾಡುತ್ತವೆ.

  ಇಂದು ಜಿಪಿ ಎಸ್‌ ಕೇವಲ ನಮ್ಮ ವೈಯಕ್ತಿಕ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿಲ್ಲ. ಆಂಬ್ಯುಲೆನ್ಸ್‌ಗಳು ರೋಗಿಗಳನ್ನು ತ್ವರಿತವಾಗಿ ಆಸ್ಪತ್ರೆಗೆ ತಲುಪಿಸಲು, ಅಗ್ನಿ ಶಾಮಕ ವಾಹನಗಳು ತುರ್ತು ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು, ಆಹಾರ ಮತ್ತು ಪಾರ್ಸೆಲ್‌ ವಿತರಣೆ ಸಿಬ್ಬಂದಿಸೇವೆಯನ್ನುವೇಗವಾಗಿನೀಡಲು, ಶಾಲಾಬಸ್‌ಗಳು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಜಿಪಿಸ್‌ ಮಹತ್ವದ ಪಾತ್ರವಹಿಸುತ್ತಿದೆ.

  ಆದರೆ ಜಿಪಿ ಎಕ್‌ ಕೂಡ ಎಲ್ಲ ಸಂದರ್ಭಗಳಲ್ಲಿ ಸಂಪೂರ್ಣ ಪರಿಪೂರ್ಣವಲ್ಲ. ಸುರಂಗ ಮಾರ್ಗಗಳಲ್ಲಿ, ದಟ್ಟ ಅರಣ್ಯ ಪ್ರದೇಶಗಳಲ್ಲಿ, ಎತ್ತರದ ಕಟ್ಟಡಗಳ ನಡುವೆ ಅಥವಾ ಮೊಬೈಲ್‌ ನೆಟ್ವರ್ಕ್‌ ಕಡಿಮೆ ಇರುವ ಪ್ರದೇಶಗಳಲ್ಲಿಅದರ ಕಾರ್ಯಕ್ಷಮತೆ ಸ್ವಲ್ಪ ಕಡಿಮೆಯಾಗಬಹುದು. ಕೆಲವೊಮ್ಮೆ ಸಂಚಾರ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಬದಲಾಗುವುದರಿಂದ ಸೂಚಿಸಿದ ಮಾರ್ಗವೂ ಬದಲಾಗಬಹುದು. ಮುಂದಿನ ಬಾರಿ ನಿಮ್ಮ ಮೊಬೈಲ್ “200 ಮೀಟರ್‌ ನಂತರ ಎಡಕ್ಕೆತಿರುಗಿ” ಎಂದು ಹೇಳಿದಾಗ, ಅದು ಕೇವಲ ದಿಕ್ಕು ತೋರಿಸುತ್ತಿಲ್ಲ ಎಂಬುದನ್ನು ನೆನಪಿಡಿ. ಬದಲಿಗೆ, ಬಾಹ್ಯಾಕಾಶದಲ್ಲಿರುವ ಉಪಗ್ರಹಗಳು, ಅತ್ಯಂತ ನಿಖರವಾದ ಗಣಿತ ಲೆಕ್ಕಾಚಾರಗಳು, ನೈಜ ಸಮಯದ ವಾಹನ ಸಂಚಾರ ಮಾಹಿತಿ ಮತ್ತು ಕಂಪ್ಯೂಟರ್‌ ವಿಜ್ಞಾನದ ಶಕ್ತಿಯನ್ನು ಬಳಸಿಕೊಂಡು ನಿಮಗಾಗಿ ಅತ್ಯಂತ ವೇಗವಾದ ಮತ್ತು ಸುರಕ್ಷಿತ ಮಾರ್ಗವನ್ನು ಆಯ್ಕೆಮಾಡುತ್ತಿದೆ.

  ನಮ್ಮ ದೈನಂದಿನ ಬದುಕನ್ನು ಸುಲಭ ಗೊಳಿಸುವ ತಂತ್ರಜ್ಞಾನಗಳಲ್ಲಿ ಜಿಪಿಎಸ್ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ನಾವು ಗಮನಿಸದೆಯೇ ಪ್ರತಿದಿನ ಬಳಸುವ ಈ ತಂತ್ರಜ್ಞಾನ ನಮ್ಮ ಸಮಯವನ್ನುಉಳಿಸಿ, ಪ್ರಯಾಣವನ್ನು ಸುರಕ್ಷಿತ, ಸುಗಮ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ. ನಿಜಕ್ಕೂ, ಜಿಪಿಎಸ್‌ ನಮ್ಮ  ಕೈಯಲ್ಲಿರುವ ಅತ್ಯಂತ ಬುದ್ಧಿವಂತ ಪ್ರಯಾಣ ಸಂಗಾತಿಯಾಗಿದೆ.

  ಡಾ. ತೇಜಸ್ವಿನಿ ಎಚ್.
ಸಹಾಯಕ ಪ್ರಾಧ್ಯಾಪಕಿ ಹಾಗೂ ಪ್ರಭಾರ ವಿಭಾಗಾಧ್ಯಕ್ಷೆ  (Assistant Professor and Incharge HOD).
ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ ವಿಭಾಗ (Department of Artificial Intelligence and Data science)
ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ (SMVITM), ಬಂಟಕಲ್.

Leave a comment

Your email address will not be published. Required fields are marked *

eMedia Kannada  @2025. All Rights Reserved.