ಉಡುಪಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬೃಜ್ ಭೂಷಣ್ ಶರಣ್ ಸಿಂಗ್ ಅವರನ್ನು ತಕ್ಷಣ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಬೃಜ್ ಭೂಷಣ್ ಸಿಂಗ್ ತಕ್ಷಣ ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ, ಬೃಜ್ ಭೂಷಣ್ಗೆ ಯಾವುದೇ ರೀತಿಯ ರಕ್ಷಣೆಯನ್ನು ನೀಡಬಾರದು. ದೇಶದ ಹೆಮ್ಮೆಯ ಕುಸ್ತಿಪಟುಗಳ ಹೋರಾಟಕ್ಕೆ ಮಹಿಳಾ ಕಾಂಗ್ರೆಸ್ ಬೆಂಬಲವಾಗಿ ನಿಂತು ಸರಕಾರದ ಮುಂದೆ ಈ ಬೇಡಿಕೆಗಳನ್ನು ಇಟ್ಟಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆ ಗೋಪಿ ನಾಯ್ಕ, ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಮಾಧವ ಬನ್ನಂಜೆ, ಮುಖಂಡರಾದ ರೋಶನಿ ಒಲಿವೇರಾ, ಸುಕನ್ಯಾ ಪೂಜಾರಿ, ಪ್ರಮೀಳಾ ಸುವರ್ಣ, ಲಕ್ಷ್ಮೀ ನಾಯ್ಕ ಉಪಸ್ಥಿತರಿದ್ದರು.

