ಕಾಪು ಮೆಸ್ಕಾಂ ಕಚೇರಿಯಲ್ಲಿ ಮಂಗಳವಾರ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉಡುಪಿ ವಿಭಾಗದ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್ ಉತ್ತರಿಸಿದರು.
ಈ ಸಂದರ್ಭ ಅವರು ಮಾತನಾಡಿ, ಮಳೆಗಾಲದ ತುರ್ತು ಪರಿಸ್ಥಿತಿಯನ್ನು ಎದುರಿಸಲು ಮೆಸ್ಕಾಂ ಸನ್ನದ್ಧವಾಗಿದೆ. ಉಡುಪಿ ವಿಭಾಗದಲ್ಲಿ ಮಳೆಗಾಲದ ನಾಲ್ಕು ತಿಂಗಳ ಕರ್ತವ್ಯ ನಿರ್ವಹಣೆಗಾಗಿ ತಾತ್ಕಾಲಿಕ ನೆಲೆಯಲ್ಲಿ ೪೨ ಮಂದಿ ಗ್ಯಾಂಗ್‌ಮೆನ್‌ಗಳನ್ನು ನೇಮಿಸಿಕೊಳ್ಳಲಾಗಿದೆ. ಗ್ಯಾಂಗ್‌ಮೆನ್‌ಗಳ ಜತೆಗೆ ಶಿರ್ವ, ಪಡುಬಿದ್ರಿ, ಹೆಗ್ಗುಂಜೆ, ಕಲ್ಯಾಣಪುರ, ಹಿರಿಯಡಕ ಸರ್ವೀಸ್ ಸ್ಟೇಷನ್ ವ್ಯಾಪ್ತಿಗೆ ತಲಾ ಒಂದು ವಾಹನವನ್ನು ಒದಗಿಸಲಾಗಿದೆ ಎಂದು ಉಡುಪಿ ವಿಭಾಗದ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್ ಹೇಳಿದರು.
ಕರೆಂಟ್ ಬಿಲ್ ಹೆಚ್ಚಳದ ಬಗ್ಗೆ ಜನಾಕ್ರೋಶ ವ್ಯಕ್ತವಾಗಿರುವ ಬಗ್ಗೆ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ನಾಗರಾಜ್ ಭಟ್ ಪಾಂಗಾಳ ಅಧಿಕಾರಿಗಳ ಗಮನಕ್ಕೆ ತಂದರು.
ಗ್ರಾಹಕರಿಗೆ ವಿದ್ಯುತ್ ಲೈನ್ ವಿಸ್ತರಣೆಗೆ ಮೆಸ್ಕಾಂನಿಂದ ಸಿಗುವ ಸಾಮಗ್ರಿಗಳ ಪೈಕಿ ಕೆಲವೊಂದು ಸಾಮಗ್ರಿಗಳು ಲಭ್ಯತೆಯಿಲ್ಲದ ಕಾರಣ ಸಮಯಕ್ಕೆ ಸರಿಯಾಗಿ ದೊರಕುತ್ತಿಲ್ಲ ಎನ್ನುವುದರ ಬಗ್ಗೆ ಅನ್ವರ್ ಅಲಿ ದೂರಿದರು.
ಹೆದ್ದಾರಿ ಬದಿಯಲ್ಲಿ ಜಂಗಲ್ ಕಟ್ಟಿಂಗ್ ಆಗಿಲ್ಲ, ಕಂಬಗಳಲ್ಲಿ ಬಳ್ಳಿಗಳು ಜೋತು ಬಿದ್ದು ಅಪಾಯಕಾರಿಯಾಗಿ ಗೋಚರಿಸುತ್ತಿವೆ ಎಂದು ಮುಷ್ತಾಕ್ ಅಹಮದ್ ದೂರಿದರು.
ಮೆಸ್ಕಾಂ ಜನಸಂಪರ್ಕ ಸಭೆಗೆ ಜನರೂ ಬರುತ್ತಿಲ್ಲ, ಜನಪ್ರತಿನಿಧಿಗಳೂ ಬರುತ್ತಿಲ್ಲ. ಜನಸಂಪರ್ಕ ಸಭೆಯ ಬಗ್ಗೆ ಕಾಪು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್‌ಗಳು ಮತ್ತು ಪುರಸಭೆಯ ಎಲ್ಲಾ ಸದಸ್ಯರಿಗೂ ಪತ್ರ ಹೋಗಿದೆಯೇ ಎಂದು ಯಾದವ ಪೂಜಾರಿ ಕಾಪು ಪ್ರಶ್ನಿಸಿದರು.
ಕಾಪು ವಲಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಗುತ್ತಿಗೆದಾರ ರವೀಂದ್ರ ಪೂಜಾರಿ, ಗುತ್ತಿಗೆದಾರ ವಸಂತ ಸುವರ್ಣ ಕಟಪಾಡಿ ಸಹಿತ ಕಾಪು ತಾಲೂಕು ವ್ಯಾಪ್ತಿಯ ಅಧಿಕಾರಿಗಳು ಭಾಗವಹಿಸಿದ್ದರು.

